ಸ್ವಾಭಿಮಾನಿ ಲೋಕಮಾನ್ಯ ತಿಲಕರು
[ಶ್ರಾವಣ ಶುಕ್ಲ ಪಕ್ಷ ತ್ರಯೋದಶಿ (೧.೮.೨೦೨೦)]
ಬಾಲಗಂಗಾಧರ ತಿಲಕರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳಾಗಿದ್ದರು. ಅವರ ಸ್ಮರಣಶಕ್ತಿಯು ಅಗಾಧವಾಗಿತ್ತು. ತಂದೆ ಗಂಗಾಧರ ಪಂತರಿಂದ ಸಂಸ್ಕೃತವನ್ನು ಮನೆಯಲ್ಲೇ ಕಲಿತರು. ಸಂಸ್ಕೃತದ ಒಂದು ಶ್ಲೋಕವನ್ನು ಕಂಠಪಾಠ ಮಾಡಿದರೆ ಅವರಿಗೆ ಒಂದು ಪೈಸೆ ಸಿಗುತ್ತಿತ್ತು. ಹೀಗೆ ಅವರಿಗೆ ೨೦೦ ಪೈಸೆಗಳು ಸಿಕ್ಕಿದ್ದವು. ಶಾಲೆಗೆ ಸೇರುವ ಮುನ್ನವೇ ಅವರಿಗೆ ಅನೇಕ ವಿಷಯಗಳ ಜ್ಞಾನ ದೊರಕಿತ್ತು. ಅವರ ಬಾಯಿಪಾಠದ ಶಕ್ತಿಯನ್ನು ಗಮನಿಸಿ ಅಧ್ಯಾಪಕರು ಆಶ್ಚರ್ಯಚಕಿತರಾಗುತ್ತಿದ್ದರು. ಒಂದು ದಿನ ತರಗತಿಯಲ್ಲಿ ‘ಡಿಕ್ಟೇಶನ್ ಬರೆಯಲು ಹೇಳಿದ್ದರು. ಅದರಲ್ಲಿ ‘ಸಂತ’ ಈ ಶಬ್ದವು ಆಗಾಗ ಬರುತ್ತಿತ್ತು. ತಿಲಕರು ಅದನ್ನು ದೇವನಾಗರಿ ಲಿಪಿಯಲ್ಲಿ ಮೂರೂ ರೀತಿಯಲ್ಲಿ ಬರೆದಿದ್ದರು. ಗುರುಗಳು ಮೊದಲಿನದು ಸರಿಯಾಗಿದೆ ಉಳಿದೆರಡು ತಪ್ಪು ಎಂದು ಹೇಳಿದರು. ಆಗ ತಿಲಕರು ತಾನು ಬರೆದಿರುವ ಮೂರು ಶಬ್ದಗಳು ಸರಿಯಾಗಿವೆ ಎಂದು ಉದಾಹರಣೆ ಸಹಿತ ಅಧ್ಯಾಪಕರಲ್ಲಿ ತಿಳಿಸಿದಾಗ ಅವರು ನೀನು ಹೇಳಿದ್ದು ಸರಿ ಎಂದು ಒಪ್ಪಿಕೊಂಡರು. ತಿಲಕರು ಮಹಾವಿದ್ಯಾಲಯದಲ್ಲಿ ಬಿ.ಎ. ಪ್ರಥಮ ವರ್ಗದಲ್ಲಿರುವಾಗ ಒಂದು ವರ್ಷ ಪರೀಕ್ಷೆಯನ್ನು ಕೊಡದೇ ವ್ಯಾಯಾಮದ ಅಭ್ಯಾಸ ಮಾಡಿ ತಮ್ಮ ಶರೀರವನ್ನು ಸುದೃಢಗೊಳಿಸಿದರು. ಅವರು ಶ್ರೇಷ್ಠ ಮಲ್ಲರು ಮತ್ತು ಉತ್ತಮ ಈಜುಗಾರರಾಗಿದ್ದರು. ಶಾಲೆಗೆ ಹೋಗುತ್ತಿರುವಾಗಲೇ ನಮ್ಮ ದೇಶವನ್ನು ಆಂಗ್ಲರು ಆಳುತ್ತಿದ್ದಾರೆಂಬ ಅರಿವು ಅವರಿಗಿತ್ತು. ತಮ್ಮ ಶಿಕ್ಷಣ ಮುಗಿದೊಡನೆ ಆಂಗ್ಲರನ್ನು ಭಾರತದಿಂದ ಓಡಿಸಲು ಅವರು ನಿರಂತರ ಪ್ರಯತ್ನಿಸತೊಡಗಿದರು. ಬಾಲ್ಯದಿಂದಲೇ ಅವರಲ್ಲಿದ್ದ ಸತ್ಯ, ಛಲ, ಸ್ವಾಭಿಮಾನದಂತಹ ಉತ್ತಮ ಗುಣಗಳು ಆಂಗ್ಲರ ವಿರುದ್ಧದ ಹೋರಾಟದಲ್ಲಿ ಉಪಯೋಗಕ್ಕೆ ಬಂದವು. ಶರೀರ ದಷ್ಟಪುಷ್ಟವಾಗಿರುವುದರಿಂದ ಕಾರಾಗೃಹದಲ್ಲಿನ ಪರಿಸ್ಥಿತಿಯನ್ನು ಎದುರಿಸಲು, ರಾಜಕೀಯ ಹೋರಾಟದಲ್ಲಿ ಏರುಪೇರುಗಳನ್ನು ಸಹಿಸಲು ಸಾಧ್ಯವಾಯಿತು. ಮಂಡಾಲೆಯ ಕಾರಾಗೃಹದಲ್ಲಿ ‘ಗೀತಾ ರಹಸ್ಯ’ವನ್ನು ಬರೆದರು.
ವಿದ್ಯಾರ್ಥಿಯಾಗಿರುವಾಗಲೇ ಕರಗತವಾಗಿದ್ದ ಸತ್ಯಕ್ಕಾಗಿ ಛಲ ಮತ್ತು ಸ್ವಾಭಿಮಾನದ ಗುಣಗಳಿಂದಲೇ ಅವರು ಹಿಂದುಸ್ಥಾನದಲ್ಲಿ ಅನ್ಯಾಯ ಎಸಗುತ್ತಿರುವ ಆಂಗ್ಲರ ವಿರುದ್ಧ ಹೋರಾಡಲು ಶಕ್ತರಾದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ಭಾರತದ ಆದರ್ಶ ಪುತ್ರರೆಂದು ಗೌರವಿಸಲ್ಪಡುತ್ತಿದ್ದಾರೆ. – ಶ್ರೀ. ನಿತೀನ ಕುಲಕರ್ಣಿ, ಫೋಂಡಾ.