ಸಂಕಷ್ಟದ ಸಮಯದಲ್ಲಿ ಕಾರ್ಮಿಕರನ್ನು ಬೀದಿಪಾಲು ಮಾಡುವುದು ನಿಮ್ಮ ನೈತಿಕತೆಯೇ ? – ಉದ್ಯಮಿ ರತನ ಟಾಟಾರಿಂದ ಕಂಪನಿಗಳಿಗೆ ಪ್ರಶ್ನೆ

ಕಾರ್ಮಿಕರ ಸಂಖ್ಯೆ ಕಡಿತಗೊಳಿಸಿದ ಕಂಪನಿಗಳ ಮೇಲೆ ಹರಿಹಾಯ್ದ ಉದ್ಯಮಿ ರತನ ಟಾಟಾ

ನವ ದೆಹಲಿ – ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ನಿಮಗಾಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ನಿಮ್ಮ ಸೇವೆಯಲ್ಲಿ ಕಳೆದಿದ್ದಾರೆ. ಅವರನ್ನು ಬೀದಿಪಾಲು ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಇದುವೇ ನಿಮ್ಮ ನೈತಿಕತೆಯೇ?’, ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ ಟಾಟಾ ಅವರು ‘ಯುವರ್ ಸ್ಟೋರಿ’ಗೆ ನೀಡಿದ ಒಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ಕರೋನಾದಿಂದ ಉಂಟಾದ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಹಲವಾರು ಕಂಪನಿಗಳು ಕಾರ್ಮಿಕರ ಸಂಖ್ಯೆ ಕಡಿತಗೊಳಿಸಿದ ಬಗ್ಗೆ ಟಾಟಾ ಇವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತ್ತಾ ಕಂಪನಿಗಳಿಗೆ ಮೇಲಿನ ಪ್ರಶ್ನೆಯನ್ನು ಕೇಳಿದ್ದಾರೆ.

‘ದೇಶದಲ್ಲಿ ಕರೋನಾದ ಹಾವಳಿ ಪ್ರಾರಂಭವಾದಾಗ, ಅನೇಕ ಕಂಪನಿಗಳಿಂದ ಸಾವಿರಾರು ಕಾರ್ಮಿಕರನ್ನು ವಜಾಗೊಳಿಸಲಾಯಿತು. ಈ ಕೃತ್ಯದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆಯೇನು? ಅದು ಆಗುವುದೆಂದು ನನಗನಿಸುವುದಿಲ್ಲ. ನಿಮಗೆ ವ್ಯವಹಾರದಲ್ಲಿ ನಷ್ಟವಾಗಿದೆ ಎಂದು ಕಾರ್ಮಿಕರನ್ನು ವಜಾ ಮಾಡುವುದು ಸರಿಯಲ್ಲ. ಬದಲಾಗಿ, ಅವರ ಜವಾಬ್ದಾರಿಯು ನಮ್ಮ ಮೇಲಿರುತ್ತದೆ. ನೀವು ಸಂವೇದನಾಶೀಲತೆ ಕಾಪಾಡಿದರೆ ನೀವು ವ್ಯವಹಾರದಲ್ಲಿ ಉಳಿಯಬಹುದು, ಎಂದು ಹೇಳಿದ್ದಾರೆ.

ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದೇ ಪರಿಹಾರವಾಗಿದೆ!

ಕರೋನಾದ ಬಗ್ಗೆ ಮಾತನಾಡಿದ ಟಾಟಾ, ‘ನಿಮಗೆ ಮರೆಮಾಡಲು ಅಥವಾ ಓಡಲು ಸ್ಥಳವಿಲ್ಲ. ಕರೋನಾ ಮಹಾಮಾರಿಯಿಂದ ನೀವು ಹೋದಲ್ಲೆಲ್ಲಾ ಹಾನಿಯೇ ಆಗಲಿದೆ. ಹಾಗಾಗಿ, ನೀವು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದೇ ಇದರ ಪರಿಹಾರವಾಗಿದೆ. ನಿಮ್ಮ ಅನೇಕ ಅಭ್ಯಾಸಗಳನ್ನು ನೀವು ಬದಲಾವಣೆ ಮಾಡಿಕೊಳ್ಳಬೇಕಾಗಬಹುದು’, ಎಂದರು.