ದ್ವಾರಕಾ (ಗುಜರಾತ) – ಗುಜರಾತನಲ್ಲಿ ಕೆಲವು ದಿನಗಳ ಹಿಂದೆ ದ್ವಾರಕೆಯ ಭಗವಾನ ಶ್ರೀಕೃಷ್ಣನ ದ್ವಾರಕಾಧೀಶ ದೇವಸ್ಥಾನದ ಕಳಸದ ಮೇಲಿನ ಧ್ವಜದ ದಂಡ ತುಂಡಾಗಿರುವ ಘಟನೆ ನಡೆದಿತ್ತು. ಅಲ್ಲಿ ಸತತ ೩ ದಿನಗಳಿಂದ ಮಳೆ ಬರುತ್ತಿದ್ದರಿಂದ ಅದರ ದಂಡ ಮುರಿದಿದೆ ಎಂದು ಹೇಳಲಾಗುತ್ತಿದೆ. ಇದು ಅಶುಭವಾಗಿದೆ ಎಂಬ ನಂಬಿಕೆ ಇದ್ದು ‘ಏನಾದರು ಅನಾಹುತ ನಡೆಯಬಹುದು’, ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ದೇವಸ್ಥಾನದ ಅರ್ಚಕರಾದ ಮುಕುಂದ ಗುಗಡಿಯವರು ಈ ಬಗ್ಗೆ ಹೇಳುತ್ತಾ, ‘ಧ್ವಜಸ್ತಂಭ ಮುರಿಯುವುದು, ಇದು ರಾಜ್ಯದ ಅಥವಾ ರಾಜ್ಯದ ಆಡಳಿತಾರೂಢ ವ್ಯಕ್ತಿಯ ಮೇಲೆ ವಿಪತ್ತು ಬರುವ ಸೂಚನೆಯಾಗಿದೆ. ೧೯೯೮ ರಲ್ಲಿ ಧ್ವಜ ಸ್ತಂಭ ಮುರಿದಿದ್ದರಿಂದ ಗುಜರತದ ಕಾಂಡಲಾ ಬಂದರಿನಲ್ಲಿ ವಿನಾಶಕಾರಿ ಚಂಡಮಾರುತ ಬಂದಿತ್ತು’ ಎಂದಿದ್ದಾರೆ.