ಸರ್ವೋಚ್ಚ ನ್ಯಾಯಾಲಯ: ನ್ಯಾಯಮೂರ್ತಿಗಳೆದುರು ದಾಖಲೆಗಳನ್ನು ಎಸೆದ ವ್ಯಕ್ತಿ

ಮುಖ್ಯ ನ್ಯಾಯಮೂರ್ತಿಗಳ ಕುರಿತು ಆಕ್ಷೇಪಾರ್ಹ ಪದ ಬಳಕೆ!

ಪ್ರಬಲ್ ಪ್ರತಾಪ್ (ವೃತ್ತದಲ್ಲಿ)

ನವದೆಹಲಿ – ಸರ್ವೋಚ್ಚ ನ್ಯಾಯಾಲಯದಲ್ಲಿ (ಸುಪ್ರೀಂ ಕೋರ್ಟ್) ತನ್ನ ಪರ ವಾದ ಮಂಡಿಸಲು ಬಂದಿದ್ದ ಪ್ರಬಲ್ ಪ್ರತಾಪ್ ಎಂಬ ಅರ್ಜಿದಾರನೊಬ್ಬ ನ್ಯಾಯಮೂರ್ತಿಗಳೊಂದಿಗೆ ವಾಗ್ವಾದ ನಡೆಸಿ, ನ್ಯಾಯಾಲಯದಲ್ಲಿ ದಾಖಲೆಪತ್ರಗಳನ್ನು ತೂರಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ಮುಖ್ಯ ನ್ಯಾಯಮೂರ್ತಿಗಳ (CJI) ಕುರಿತಾಗಿಯೂ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾನೆ. ಈ ಘಟನೆಯ ನಂತರ ಆತನನ್ನು ಭದ್ರತಾ ಸಿಬ್ಬಂದಿಯ ನೆರವಿನೊಂದಿಗೆ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸಲಾಯಿತು.

ಲಕ್ಷ್ಮಣಪುರಿ (ಉತ್ತರ ಪ್ರದೇಶ) ಜಿಲ್ಲೆಯ ಹೆಚ್ಚುವರಿ ಪೊಲೀಸ್ ಕಮಿಷನರ್ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕೆಂಬ  ಬೇಡಿಕೆಯೊಂದಿಗೆ ಪ್ರಬಲ್ ಪ್ರತಾಪ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದನು. ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಆಲೋಕ್ ಅರಾಧೆ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಯ ವೇಳೆ ಆತ ನ್ಯಾಯಾಲಯಕ್ಕೇ ಆದೇಶಿಸುವ ಧಾಟಿಯಲ್ಲಿ ಮಾತನಾಡಲು ಆರಂಭಿಸಿದನು. “ನಾನು ನಿಮಗೆ ಆದೇಶಿಸುತ್ತಿದ್ದೇನೆ” ಎಂಬ ಹೇಳಿಕೆ ನೀಡಿದನು. ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿಶ್ವನಾಥನ್ ಅವರು, “ನೀವು ನಮಗೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಆದರೂ ಪ್ರಬಲ್ ಪ್ರತಾಪ್ ತನ್ನ ಮಾತನ್ನು ಮುಂದುವರಿಸಿ, ತಾನೇ ಸರ್ವೋಚ್ಚ ಅಧಿಕಾರ ಉಳ್ಳವನು ಎಂದು ಹೇಳಿದನು ಮತ್ತು ದಿಢೀರನೆ ತನ್ನ ಕೈಯಲ್ಲಿದ್ದ ದಾಖಲೆಪತ್ರಗಳನ್ನು  ತೂರಿದನು.

ಕ್ರಮ ಕೈಗೊಳ್ಳಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ!

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿಶ್ವನಾಥನ್, “ನಾವು ಆತನ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ನಾವು ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಆಕ್ಷೇಪಣೆಗೊಳಗಾದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಬಲವಾದ ಕಾರಣಗಳು ಕಂಡುಬಂದಿಲ್ಲ. ಹೀಗಾಗಿ ಈ ವಿಶೇಷ ಅನುಮತಿ ಅರ್ಜಿಯನ್ನು (SLP) ವಜಾಗೊಳಿಸಲಾಗುತ್ತಿದೆ. ಪ್ರಬಲ್ ಪ್ರತಾಪ್ ತೀವ್ರ ಅಸಮಾಧಾನಗೊಂಡಿದ್ದಾರೆ. ಇದೆಲ್ಲವೂ ಅವರ ಆಕ್ರೋಶದ ಹೊರಹಾಕುವಿಕೆಯಾಗಿದೆ. ನಮಗೆ ಅವರ ಬಗ್ಗೆ ಸಹಾನುಭೂತಿ ಇದೆ” ಎಂದು ಹೇಳಿದರು.