ಬಂಗಾಳ : ಬಲಾತ್ಕಾರ ಮಾಡಿದ ಆರೋಪಿ ಪೊಲೀಸ್ ಎನ್‌ಕೌಂಟರ್‍‌ನಲ್ಲಿ ಬಲಿ

ಕೊಲಕಾತಾ (ಬಂಗಾಳ) – ದಕ್ಷಿಣ ೨೪ ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಲೆ ಮಾಡಿದ ಪ್ರಕರಣದ ಆರೋಪಿ ಪ್ರಭಾಸ ಮಂಡಲ ಪೊಲೀಸ್ ಎನ್‌ ಕೌಂಟರ್‌ ನಲ್ಲಿ ಸಾವನ್ನಪ್ಪಿದ್ದಾನೆ.

೧. ಪ್ರಭಾಸ ಮಂಡಲ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸರೊಬ್ಬರ ರೈಫಲ್ ಕಸಿದುಕೊಂಡಿದ್ದಾನೆ. ಆ ಬಳಿಕ ಪೊಲೀಸ್ ಮತ್ತು ಆರೋಪಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಅದರಲ್ಲಿ ಪ್ರಭಾಸ ಮಂಡಲ್ ಗೆ ಗುಂಡು ತಗುಲಿದೆ. ಆತನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು, ಎಂದು ಪೊಲೀಸರು ತಿಳಿಸಿದ್ದಾರೆ.

೨. ಬಾರುಯಿಪುರದಲ್ಲಿ ೧೧ ವರ್ಷದ ಬಾಲಕಿ ಜುಲೈ ೪ ರಂದು ನಾಪತ್ತೆಯಾಗಿದ್ದಳು. ಜುಲೈ ೫ ರಂದು ಆಕೆಯ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಆಕೆಯ ತಲೆಯ ಮೇಲೆ ಗಾಯದ ಗುರುತುಗಳಿದ್ದವು. ಬಲಾತ್ಕಾರದ ನಂತರವೂ ಬಾಲಕಿ ಜೀವಂತವಾಗಿದ್ದಳು ಮತ್ತು ಆರೋಪಿಗಳು ಆಕೆಯನ್ನು ಜೀವಂತವಾಗಿಯೇ ಕೆರೆಗೆ ಎಸೆದಿದ್ದರು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

೩. ಆಕೆಯ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿದ್ದರಿಂದ ಮತ್ತು ತೀವ್ರ ರಕ್ತಸ್ರಾವದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ. ಬಲಾತ್ಕಾರ ಮತ್ತು ಕೊಲೆ ಆರೋಪದ ಮೇಲೆ ಪೊಲೀಸರು ಪ್ರಭಾಸ ಮಂಡಲ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಇಂತಹ ಕೃತ್ಯ ಎಸಗಿದ ಮಗನ ಮೇಲೆ ನಮಗೆ ಅನುಕಂಪವಿಲ್ಲ, ಶವವನ್ನೂ ಸ್ವೀಕರಿಸುವುದಿಲ್ಲ! – ಮೃತ ಆರೋಪಿಯ ತಾಯಿಯ ನಿಲುವು

ಆರೋಪಿ ಪ್ರಭಾಸ ಮಂಡಲ ತಾಯಿ ಆತನ ಸಾವಿನ ಬಗ್ಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಪೊಲೀಸರು ಮನೆಗೆ ಬಂದು ಮಗನ ಸಾವಿನ ಸುದ್ದಿಯನ್ನು ತಿಳಿಸಿದರು. ನಾನು ಆಸ್ಪತ್ರೆಗೆ ಬರುವುದಿಲ್ಲ ಮತ್ತು ಮಗನ ಶವವನ್ನೂ ಸ್ವೀಕರಿಸುವುದಿಲ್ಲ ಎಂದು ಪೊಲೀಸರಿಗೆ ಹೇಳಿದ್ದೇನೆ. ಮಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಹತನಾಗಿದ್ದರೆ, ಅದು ಆತನ ಕರ್ಮಕ್ಕೆ ಸಿಕ್ಕ ಶಿಕ್ಷೆಯಾಗಿದೆ. ಆತನ ಹೆಸರು ಈ ಅಪರಾಧದಲ್ಲಿ ಕೇಳಿಬಂದ ಮೇಲೆ, ನಮ್ಮ ಮನಸ್ಸಿನಲ್ಲಿ ಆತನ ಬಗ್ಗೆ ಯಾವುದೇ ಕರುಣೆ ಉಳಿದಿಲ್ಲ. ಒಂದು ವೇಳೆ ಮಗನಿಗೆ ನೈಸರ್ಗಿಕ ಸಾವು ಬಂದಿದ್ದರೆ, ಕೊನೆಯ ಬಾರಿಗೆ ಆತನ ಮುಖ ನೋಡಲು ಹೋಗುತ್ತಿದ್ದೆ; ಆದರೆ ಈಗ ಹೋಗುವುದಿಲ್ಲ ಎಂದು ಕಠಿಣವಾಗಿ ಹೇಳಿದ್ದಾರೆ.