ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ !

  • ​ಗುಡ್ಡ ಕುಸಿತದಿಂದ ಮುಂಬಯಿ-ಪುಣೆ ಹೆದ್ದಾರಿ ಸ್ಥಗಿತ

  • ಹಳಿಗಳ ಮೇಲೆ ನೀರು ನಿಂತಿದ್ದರಿಂದ ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ

  • ಆಳಂದಿಯಲ್ಲಿ ಇಂದ್ರಾಯಣಿ ನದಿಯು ಅಪಾಯದ ಮಟ್ಟವನ್ನು ಮೀರಿದೆ

  • ಜುಲೈ ೮ ರವರೆಗೆ ಅತಿದಕ್ಷತೆಯ ಎಚ್ಚರಿಕೆ

ಮುಂಬಯಿ – ರಾಜ್ಯದಲ್ಲಿ ಜುಲೈ ೬ ರಂದು ಹಲವೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ಮುಂಬಯಿ, ಠಾಣೆ, ರಾಯಗಡ, ಪುಣೆ, ಪಾಲಘರ, ರತ್ನಾಗಿರಿ, ಸಿಂಧುದುರ್ಗ ಹಾಗೂ ಘಟ್ಟ ಪ್ರದೇಶಗಳಿಗೆ ಭಾರಿ ಹೊಡೆತ ಬಿದ್ದಿದೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ, ಸಂಚಾರ ವ್ಯತ್ಯಯ, ನೀರು ನುಗ್ಗುವುದು, ಮರಗಳು ಬುಡಮೇಲಾಗುವುದು ಮುಂತಾದ ಘಟನೆಗಳು ನಡೆದಿವೆ. ಹಲವು ನಗರಗಳ ನದಿಗಳು ಅಪಾಯದ ಮಟ್ಟವನ್ನೂ ಮೀರಿವೆ. ಇದರ ಪರಿಣಾಮವು ಅಲ್ಲಿನ ಜನಜೀವನದ ಮೇಲಾಗಿದೆ. ಹವಾಮಾನ ಇಲಾಖೆಯು ಮುಂಬಯಿ, ಠಾಣೆ ಮತ್ತು ರಾಯಗಡ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಭಾರಿ ಜಾಗರೂಕತೆಯ ಮುನ್ನೆಚ್ಚರಿಕೆಯನ್ನು ನೀಡಿದೆ.

ಮುಂಬಯಿ – ​ಮುಂಬಯಿಯಲ್ಲಿ ವಸತಿ ಕಟ್ಟಡದ ಭಾಗ ಕುಸಿದು ೬ ಜನರ ಸಾವು

೧. ಧಾರಾಕಾರ ಮಳೆಯಿಂದಾಗಿ ಮುಂಬಯಿ ಮತ್ತು ಉಪನಗರಗಳ ಜನಜೀವನವು ಅಸ್ತವ್ಯಸ್ತಗೊಂಡಿದೆ. ಮುಂಬಯಿಯ ಮಾನಖುರ್ದ್‌ನ ಜನತಾನಗರ ಪ್ರದೇಶದಲ್ಲಿ ಜುಲೈ ೫ ರ ರಾತ್ರಿ ಮೂರು ಅಂತಸ್ತಿನ ಕಚ್ಚಾ ಚಾಲ್‌ ನ (ವಸತಿ ಕಟ್ಟಡದ) ಒಂದು ಭಾಗವು ಹಠಾತ್ತನೆ ಕುಸಿದು ಬಿದ್ದಿದೆ. ಇದರಲ್ಲಿ ೫ ಮಕ್ಕಳು ಮತ್ತು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಹಾಗೂ ಓರ್ವ ಯುವಕ ಗಾಯಗೊಂಡಿದ್ದಾನೆ. ಈ ಚಾಲ್ ಅಪಾಯಕಾರಿಯಾಗಿದ್ದರಿಂದ ನಿವಾಸಿಗಳು ಮನೆಯ ಸಾಮಾನುಗಳನ್ನು ಹೊರಗೆ ತೆಗೆಯುತ್ತಿದ್ದಾಗಲೇ ಇಡೀ ಕಟ್ಟಡವು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

೨. ಇದರೊಂದಿಗೆ ಧಾರಾಕಾರ ಮಳೆಯಿಂದಾಗಿ ಪಶ್ಚಿಮ, ಮಧ್ಯ ಮತ್ತು ಹಾರ್ಬರ್ ಈ ಮೂರೂ ಉಪನಗರ ರೈಲು ಮಾರ್ಗಗಳ ಲೋಕಲ್ ರೈಲುಗಳು ಕೆಲವು ನಿಮಿಷ ತಡವಾಗಿ ಚಲಿಸುತ್ತಿದ್ದವು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಯಿತು. ಕೆಲವು ಪ್ರಯಾಣಿಕರು ರೈಲು ನಿಲ್ದಾಣಗಳಲ್ಲೇ ಸಿಲುಕಿಕೊಂಡರು.

೩. ಹವಾಮಾನ ಇಲಾಖೆಯು ಮುಂಬಯಿಗೆ ಅತಿವೃಷ್ಟಿಯ ಎಚ್ಚರಿಕೆಯನ್ನು ನೀಡಿರುವುದರಿಂದ ಮುಂಬಯಿಯ ಎಲ್ಲಾ ಸರಕಾರಿ, ಖಾಸಗಿ, ಮಹಾನಗರ ಪಾಲಿಕೆ, ಹಾಗೂ ಅನುದಾನಿತ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪುಣೆ – ‘ಮಿಸಿಂಗ್ ಲಿಂಕ್’ ಮತ್ತು ರೈಲು ಮಾರ್ಗದ ಮೇಲೆ ಗುಡ್ಡ ಕುಸಿತ: ಮುಂಬಯಿ-ಪುಣೆ ಸಂಚಾರ ಸ್ಥಗಿತ !

೧. ಮುಂಬಯಿ-ಪುಣೆ ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಲಾದ ‘ಮಿಸಿಂಗ್ ಲಿಂಕ್’ ಬಳಿ ದೊಡ್ಡ ಗುಡ್ಡ ಕುಸಿದಿದೆ. ಹೀಗಾಗಿ ‘ಮಿಸಿಂಗ್ ಲಿಂಕ್’ ಮಾರ್ಗವನ್ನು ಮುಚ್ಚಲಾಗಿದೆ. ಹೆದ್ದಾರಿಯ ಹಲವೆಡೆ ನೀರು ನಿಂತಿದ್ದು, ನೀರು ‘ಫುಡ್ ಮಾಲ್’ನ ಆವರಣಕ್ಕೆ ನುಗ್ಗಿದೆ. ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇ ಮಾತ್ರವಲ್ಲದೆ, ಹಳೆಯ ಮುಂಬಯಿ-ಪುಣೆ ಹೆದ್ದಾರಿಯನ್ನೂ ಸಂಚಾರಕ್ಕಾಗಿ ಮುಚ್ಚಲಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳ ಸರತಿ ಸಾಲು ನಿರ್ಮಾಣವಾಗಿತ್ತು. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.

೨. ಲೋನಾವಲಾ ಬಳಿ ಹಳಿಯ ಮೇಲೆ ಗುಡ್ಡ ಕುಸಿದಿದ್ದರಿಂದ ಮುಂಬಯಿ-ಪುಣೆ ರೈಲು ಸೇವೆಯೂ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ‘ಪರಿಸ್ಥಿತಿ ಗಂಭೀರವಾಗಿರುವುದರಿಂದ ಮುಂದಿನ ಸೂಚನೆ ಬರುವವರೆಗೆ ನಾಗರಿಕರು ಪುಣೆ-ಮುಂಬಯಿ ಮಾರ್ಗದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು’, ಎಂದು ಆಡಳಿತ ಮಂಡಳಿಯು ವಿನಂತಿಸಿದೆ.

೩. ಅತಿವೃಷ್ಟಿಯಿಂದಾಗಿ ಮಾವಳ ಪ್ರಾಂತ್ಯದ ವಿಸಾಪುರ ಕೋಟೆಯ ಒಂದು ಭಾಗ ಕುಸಿದು ಗ್ರಾಮದ ಒಂದು ಕುಟುಂಬವು ಅದರಡಿ ಹೂತುಹೋಗಿದೆ. ಇದರಲ್ಲಿ ಪತಿ, ಪತ್ನಿ ಮತ್ತು ಒಬ್ಬ ಮಗ ಸೇರಿದ್ದಾರೆ. ಇಲ್ಲಿ ಸಹಾಯ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ನೆರವು ಪಡೆಯಲಾಗಿದೆ.

೪. ಪುಣೆ-ನಾಶಿಕ್ ಹೆದ್ದಾರಿಯಲ್ಲಿ ಹಲವೆಡೆ ನೀರು ನಿಂತಿದೆ. ರಸ್ತೆಯ ಮೇಲೆ ನೀರಿನ ಹರಿವು ಹೆಚ್ಚಾಗಿರುವುದರಿಂದ ಕೆಲವು ಕಡೆ ಸಂಚಾರವು ನಿಧಾನಗತಿಯಲ್ಲಿ ಸಾಗುತ್ತಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಸ್ಥಗಿತಗೊಂಡಿದೆ. ಪುಣೆ-ನಾಶಿಕ್ ಹೆದ್ದಾರಿಯ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು.