ರಾಜಸ್ಥಾನದ ಪಾಕಿಸ್ತಾನ ಗಡಿಯ 15 ಕಿ.ಮೀ. ವ್ಯಾಪ್ತಿಯಲ್ಲಿನ 12 ಅಕ್ರಮ ಮಸೀದಿಗಳ ಧ್ವಂಸ : Rajasthan Mosques Demolition

ಕಾರ್ಯಾಚರಣೆಯ ವಿರುದ್ಧ ರಾಜಸ್ಥಾನ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ

ಧ್ವಂಸಗೊಂಡ ಮಸೀದಿಗಳು

ಜೈಪುರ (ರಾಜಸ್ಥಾನ) – ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಕ್ರಮ ಮಸೀದಿಗಳನ್ನು ತೆರವುಗೊಳಿಸುವ ಆಡಳಿತಾತ್ಮಕ ಕ್ರಮದ ವಿರುದ್ಧ ವಿವಾದ ಉಂಟಾಗಿದೆ. ಬಾಡಮೇರ್, ಬಿಕಾನೇರ್ ಸೇರಿದಂತೆ ಹಲವು ಗಡಿ ಜಿಲ್ಲೆಗಳಲ್ಲಿ ಸ್ಥಳೀಯ ಮುಸ್ಲಿಮರು ಈ ಕಾರ್ಯಾಚರಣೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಮಸೀದಿಗಳನ್ನು ತೆರವುಗೊಳಿಸುವ ಮುನ್ನ ಸಂತ್ರಸ್ತ ವರ್ಗಕ್ಕೆ ಸಾಕಷ್ಟು ಅವಕಾಶ ನೀಡಲಾಗಿಲ್ಲ ಮತ್ತು ಸರಿಯಾದ ಪ್ರಕ್ರಿಯೆಯನ್ನು ಪಾಲಿಸಿಲ್ಲ ಎಂದು ಆಡಳಿತಕ್ಕೆ ಮನವಿ ಸಲ್ಲಿಸುವಾಗ ಅವರು ಆರೋಪಿಸಿದರು. ಈ ಕ್ರಮವನ್ನು ಮರುಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ, ಜೂನ್ 18 ರಿಂದ 20 ರ ಅವಧಿಯಲ್ಲಿ ಅಂತರರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ವಿವಿಧ ಹಳ್ಳಿಗಳಲ್ಲಿ ಸುಮಾರು 12 ಮಸೀದಿಗಳನ್ನು ಧ್ವಂಸಗೊಳಿಸಲಾಗಿದೆ. ಈ ಕ್ರಮವು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಸಂತ್ರಸ್ತ ಜನರಿಗೆ ತಮ್ಮ ಪರವಾಗಿ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ ಎಂದು ತಿಳಿಸಲಾಗಿದೆ.

ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ! – ರಾಜ್ಯ ಸರಕಾರ

ರಾಜ್ಯ ಸರಕಾರದ ಪರವಾಗಿ ನ್ಯಾಯಾಲಯಕ್ಕೆ, ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ. ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಶಾಶ್ವತ ನಿರ್ಮಾಣಕ್ಕೆ ನಿಗದಿತ ನಿಯಮಗಳ ಪ್ರಕಾರ ಪೂರ್ವಾನುಮತಿ ಅಗತ್ಯವಿರುತ್ತದೆ ಎಂಬುದು ಸರಕಾರದ ನಿಲುವು. ಇದೇ ಆಧಾರದ ಮೇಲೆ ಸಂಬಂಧಿತ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಅಕ್ರಮ ಮಸೀದಿಗಳನ್ನು ನಿರ್ಮಿಸುತ್ತಿರುವಾಗ ಆಡಳಿತ ವ್ಯವಸ್ಥೆಯು ಏನು ಮಾಡುತ್ತಿತ್ತು? ಕೇವಲ ಮಸೀದಿಗಳನ್ನು ಉರುಳಿಸಿ ಆಡಳಿತವು ಸುಮ್ಮನಿರಲಿದೆಯೇ ಅಥವಾ ಸಂಬಂಧಪಟ್ಟವರನ್ನು ಜೈಲಿಗೆ ತಳ್ಳಲು ಪ್ರಯತ್ನಿಸಲಿದೆಯೇ?