ಬದರಿನಾಥ ಮಂದಿರದಲ್ಲೂ ದೇಣಿಗೆ ಕಳ್ಳತನದ ಆರೋಪ

ಮಂದಿರ ಸಮಿತಿಯಿಂದ ತನಿಖೆಗೆ ಆದೇಶ

​ಡೆಹರಾಡೂನ್ (ಉತ್ತರಾಖಂಡ) – ರಾಜ್ಯದ ಪ್ರಸಿದ್ಧ ಬದರಿನಾಥ ಧಾಮದಲ್ಲಿ ದೇಣಿಗೆ ಕಳ್ಳತನವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾದ ಬೆನ್ನಲ್ಲೇ ‘ಬದರಿನಾಥ-ಕೇದಾರನಾಥ ಮಂದಿರ ಸಮಿತಿ’ಯು ಈ ಪ್ರಕರಣದ ತನಿಖೆಗೆ ಆದೇಶಿಸಿದೆ. ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪದ ಬೆನ್ನಲ್ಲೇ ಬದರಿನಾಥ ಮಂದಿರದಲ್ಲೂ ಇಂತಹ ಕಳ್ಳತನದ ಆರೋಪ ಕೇಳಿಬಂದಿರುವುದರಿಂದ ಭಕ್ತರಲ್ಲಿ ಗೊಂದಲ ಮೂಡಿದೆ.

​೧. ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಅಧ್ಯಕ್ಷ ಹೇಮಂತ ದ್ವಿವೇದಿ ಅವರು ಈ ಬಗ್ಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಮಾಡಲಾದ ಈ ಆರೋಪಗಳನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದ ಸವಿಸ್ತಾರ ತನಿಖೆಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದ್ದು, ಯಾವ ನೌಕರರ ಮೇಲೆ ಸಂಶಯ ವ್ಯಕ್ತವಾಗಿದೆಯೋ ಅವರಿಂದ ಸ್ಪಷ್ಟೀಕರಣ ಕೂಡ ಕೇಳಲಾಗಿದೆ ಎಂದು ಹೇಳಿದರು.

೨. ಈ ಪ್ರಕರಣದ ಮುಖ್ಯ ಆರೋಪಿಯು ದ್ವಿವೇದಿ ಅವರ ‘ವೈಯಕ್ತಿಕ ಕಾರ್ಯದರ್ಶಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗಿತ್ತು. ಈ ಸುದ್ದಿಯನ್ನು ಖಂಡಿಸಿದ ದ್ವಿವೇದಿ ಅವರು, ಸಂಬಂಧಪಟ್ಟ ವ್ಯಕ್ತಿ ತಮ್ಮ ‘ವೈಯಕ್ತಿಕ ಕಾರ್ಯದರ್ಶಿ’ ಅಲ್ಲ ಎಂದು ಸ್ಪಷ್ಟಪಡಿಸಿದರು. ಆ ವ್ಯಕ್ತಿಯು ಮಂದಿರ ಸಮಿತಿಯ ಒಬ್ಬ ಸಾಮಾನ್ಯ ಸರಕಾರಿ ನೌಕರನಾಗಿದ್ದಾನೆ. ಒಂದು ವೇಳೆ ತನಿಖೆಯಲ್ಲಿ ಈ ಆರೋಪಗಳು ನಿಜವೆಂದು ಸಾಬೀತಾದರೆ, ಯಾವುದೇ ದೋಷಿಯನ್ನು ರಕ್ಷಿಸುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

೩. ಮಂದಿರ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ ಸಿಂಗ್ ರಂಗಡ್ ಅವರು ಮಾತನಾಡಿ, ತನಿಖಾ ಸಮಿತಿಯು ಲಭ್ಯವಿರುವ ಎಲ್ಲಾ ಪುರಾವೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ವರದಿಯನ್ನು ಸಲ್ಲಿಸಲಿದೆ. ತನಿಖೆಯ ಸಮಯದಲ್ಲಿ ಯಾವುದೇ ಅಕ್ರಮ ಕಂಡುಬಂದಲ್ಲಿ, ‘ಶ್ರೀ ಬದರಿನಾಥ- ಕೇದಾರನಾಥ ಮಂದಿರ ಸಮಿತಿ ಕಾಯ್ದೆ, ೧೯೩೯’ ಮತ್ತು ನೌಕರರ ನೀತಿ ಸಂಹಿತೆಯ ಪ್ರಕಾರ ದೋಷಿಗಳ ವಿರುದ್ಧ ಕಠಿಣ ಕಾನೂನು ಮತ್ತು ಇಲಾಖಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

೪. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಅಧಿಕೃತ ತನಿಖೆ ಪೂರ್ಣಗೊಂಡು ಸತ್ಯಾಂಶ ಹೊರಬರುವವರೆಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ರೀತಿಯ ಅಪೂರ್ಣ ಮಾಹಿತಿಯನ್ನು ನಂಬಬಾರದು ಮತ್ತು ವದಂತಿಗಳನ್ನು ಹಬ್ಬಿಸಬಾರದೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ ಸಿಂಗ್ ರಂಗಡ್ ಅವರು ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಅಪಕೀರ್ತಿ ತರುವ ಮೂಲಕ ಹಿಂದೂ ದೇವಸ್ಥಾನಗಳಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ಇದಾಗಿರಬಹುದೇ?, ಎಂಬ ಬಗ್ಗೆಯೂ ತನಿಖೆಯಾಗುವುದು ಅತ್ಯಗತ್ಯ !