ಚಿಕ್ಕ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ ! – ವಿಶ್ವ ಹಿಂದೂ ಪರಿಷತ್

  • ಮಹಾನಗರ ಪಾಲಿಕೆ ಆಸ್ಪತ್ರೆಯ ಭಿತ್ತಿಪತ್ರದಲ್ಲಿ ಗೋಮಾಂಸ ಸೇವನೆಯ ಕುರಿತು ಬರೆಹ: ಧರ್ಮಪ್ರೇಮಿಗಳಿಂದ ಪೊಲೀಸರಿಗೆ ಮನವಿ

  • ವಾಶಿ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ ನಡೆದ ಘಟನೆ!

  • ಧರ್ಮಪ್ರೇಮಿಗಳಿಂದ ಪೊಲೀಸರಿಗೆ ಮನವಿ

ವಾಶಿ ಮಹಾನಗರ ಪಾಲಿಕೆ ಆಸ್ಪತ್ರೆಯ ಭಿತ್ತಿಪತ್ರದಲ್ಲಿ ಸಣ್ಣಗೆ ಹೆಚ್ಚಿದ ದನದ ಮಾಂಸವನ್ನು ತಿನ್ನುವಂತೆ ನೀಡಲಾದ ಸಲಹೆಯ ಬರಹ

ನವಿ ಮುಂಬಯಿ – ಇಲ್ಲಿನ ಮಹಾನಗರ ಪಾಲಿಕೆ ಆಸ್ಪತ್ರೆಯಲ್ಲಿ 9 ರಿಂದ 11ತಿಂಗಳ ಮಗುವಿಗೆ ಗೋಮಾಂಸ ತಿನ್ನಲು ಸಲಹೆ ನೀಡುವ ಭಿತ್ತಿಪತ್ರವನ್ನು ಅಳವಡಿಸಿದವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮೊಕದ್ದಮೆ ದಾಖಲಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಪೊಲಿಸರಿಗೆ ಮನವಿ ಪತ್ರ ಸಲ್ಲಿಸುತ್ತಿರುವ ಧರ್ಮಪ್ರೇಮಿಗಳು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಶಿ ಪೊಲೀಸ್ ಠಾಣೆಗೆ ಪರಿಷತ್ ಮನವಿ ಪತ್ರ ಸಲ್ಲಿಸಿದೆ. ಈ ಆಕ್ಷೇಪಾರ್ಹ ಭಿತ್ತಿಪತ್ರಗಳನ್ನು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹರಿದು ಹಾಕಿದ್ದಾರೆ.

ಮನವಿ ಪತ್ರದಲ್ಲಿರುವ ಅಂಶಗಳು:

1. ಜೂನ್ 14 ರಂದು ಕಾರ್ಯಕರ್ತ ರೋಹಿತ್ ಖಂಡಾಗಳೆ ಅವರು ಮಹಾನಗರ ಪಾಲಿಕೆಯ ವಾಶಿ ಆಸ್ಪತ್ರೆಗೆ ತೆರಳಿದ್ದರು. ಆಗ ಅವರಿಗೆ ಆಸ್ಪತ್ರೆಯ ಗೋಡೆಯ ಮೇಲೆ ‘ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP)- IYCF ವಿಭಾಗ’ದ ಹೆಸರಿನಲ್ಲಿ ‘9 ರಿಂದ 11 ತಿಂಗಳ ವಯಸ್ಸಿನ ಪೂರಕ ಆಹಾರ ಮಾರ್ಗದರ್ಶಿ’ ಎಂಬ ಶೀರ್ಷಿಕೆಯಡಿ ಭಿತ್ತಿಪತ್ರ ಅಂಟಿಸಿರುವುದು ಕಂಡುಬಂದಿತು.

2. ಈ ಭಿತ್ತಿಪತ್ರದಲ್ಲಿ ಸಣ್ಣದಾಗಿ ಕತ್ತರಿಸಿದ ಮಾಂಸ (ಕೋಳಿ ಮಾಂಸ, ಕುರಿ ಮಾಂಸ, ಗೋಮಾಂಸ) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಿಂದೂ ಧರ್ಮದಲ್ಲಿ ಹಸುವನ್ನು ಪವಿತ್ರವೆಂದು ಪೂಜಿಸಲಾಗುತ್ತದೆ. ಆದ್ದರಿಂದ ಗೋಮಾಂಸ ಭಕ್ಷಣೆ ಮಾಡುವುದು ಹಿಂದೂ ಧರ್ಮಕ್ಕೆ ವಿರೋಧವಾಗಿದೆ. ಮಗುವಿಗೆ ಗೋಮಾಂಸ ತಿನ್ನಿಸಲು ಸಲಹೆ ನೀಡುವುದು ಅತ್ಯಂತ ನಿಂದನೀಯ ಹಾಗೂ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹದ್ದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಭಿತ್ತಿಪತ್ರವನ್ನು ಹಚ್ಚುವುದು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನದಂತೆ ತೋರುತ್ತಿದೆ.

3. ಈ ಪ್ರಕರಣದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ಭಿತ್ತಿಪತ್ರವನ್ನು ಹಾಕಿದ ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಠಿಣ ಕಾನೂನು ಮತ್ತು ಸರಕಾರಿ ಕ್ರಮ ಕೈಗೊಳ್ಳಬೇಕು, ಹಾಗೆಯೇ ಈ ಆಕ್ಷೇಪಾರ್ಹ ಭಿತ್ತಿಪತ್ರವನ್ನು ತಕ್ಷಣವೇ ತೆರವುಗೊಳಿಸಲು ಆದೇಶಿಸಬೇಕು ಎಂದು ಕೋರಲಾಗಿದೆ.

ಸಂಪಾದಕೀಯ ನಿಲುವು

  • ಗೋಪ್ರೇಮಿಗಳ ರಾಜ್ಯದಲ್ಲಿ ಇಂತಹ ಸಲಹೆ ನೀಡಲಾಗುತ್ತಿದೆ ಎನ್ನುವುದೇ ಆಕ್ರೋಶದ ಸಂಗತಿಯಾಗಿದೆ ! ಇತರ ಧರ್ಮದವರ ಧಾರ್ಮಿಕ ಭಾವನೆಗಳ ಬಗ್ಗೆ ಇಂತಹ ಸಲಹೆ ನೀಡುವ ಧೈರ್ಯ ಇವರು ಮಾಡುವರೇ?
  • ಇಂತಹ ಮನವಿಗಳನ್ನು ನೀಡುವ ಮತ್ತು ಒತ್ತಾಯಿಸುವ ಪ್ರಮೇಯವೇ ಏಕೆ ಬರುತ್ತದೆ ? ರಾಜ್ಯದಲ್ಲಿ ಗೋವಂಶ ಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಹೀಗಾಗುತ್ತಿರುವುದು ದುರ್ದೈವದ ಸಂಗತಿ !