Kolkata Runway Mosque : ಕೊಲಕಾತಾ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಳೆ ಮಸೀದಿ ತೆರವು

ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಹಲವು ಬಾರಿ ಸರಕಾರಕ್ಕೆ ತಿಳಿಸಿದ್ದರೂ ವಿಮಾನಗಳಿಗೆ ಅಪಾಯಕಾರಿಯಾಗಿದ್ದ ಮಸೀದಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ!

ಕೊಲಕಾತಾ(ಬಂಗಾಳ) – ಕೊಲಕಾತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಹಾಗೂ ದಶಕಗಳಷ್ಟು ಹಳೆಯದಾದ ಮಸೀದಿಯನ್ನು ತೆರವುಗೊಳಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ತಂಡವು ಮಸೀದಿಯ ಜಾಗವನ್ನು ಪರಿಶೀಲಿಸಿದೆ. ತದನಂತರ ರಾಜ್ಯ ಆಡಳಿತ ಮತ್ತು ಮಸೀದಿ ಸಮಿತಿಯ ಪ್ರತಿನಿಧಿಗಳ ನಡುವೆ ಒಂದು ಪ್ರಮುಖ ಸಭೆ ನಡೆಯಿತು. ಈ ಸಭೆಯಲ್ಲಿ ವಿಮಾನ ನಿಲ್ದಾಣದ ಸುರಕ್ಷತೆಯನ್ನು ಉಲ್ಲೇಖಿಸಿ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತು ನೀಡಲಾಯಿತು.

136 ವರ್ಷಗಳಷ್ಟು ಹಳೆಯದಾದ ‘ಗೌರಿಪುರ ಜಾಮೆ ಮಸೀದಿ’ (ಇದನ್ನು ‘ಬಾಕ್ರಾ ಮಸೀದಿ’ ಎಂದೂ ಕರೆಯಲಾಗುತ್ತದೆ) ಒಂದು ಕಾಲದಲ್ಲಿ ದೊಡ್ಡ ನಿರ್ಜನ ಪ್ರದೇಶದಲ್ಲಿತ್ತು; ಆದರೆ ವಿಮಾನ ನಿಲ್ದಾಣದ ನಿರಂತರ ವಿಸ್ತರಣೆಯಿಂದಾಗಿ ಇಂದು ಅದು ರನ್‌ ವೇಯ ತೀರಾ ಹತ್ತಿರದ ಸೂಕ್ಷ್ಮ ಪ್ರದೇಶಕ್ಕೆ ಬಂದಿದೆ.

ವಿಮಾನಗಳ ಸುರಕ್ಷತೆಗೆ ದೊಡ್ಡ ಅಪಾಯ

ಉತ್ತರ 24 ಪರಗಣ ಜಿಲ್ಲಾ ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನಕ್ಷೆಯ ಮೂಲಕ ಮಸೀದಿಯ ಅಸ್ತಿತ್ವದಿಂದಾಗಿ ವಿಮಾನಗಳ ಸುರಕ್ಷತೆಗೆ ಎಷ್ಟು ಗಂಭೀರ ಸವಾಲುಗಳು ಮತ್ತು ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಮಸೀದಿ ಸಮಿತಿಯ ಪರವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಸಿದ್ದಿಕುಲ್ಲಾ ಚೌಧರಿ ಅವರು ಮಾತನಾಡಿ, ನಾವು ಇದರ ಬಗ್ಗೆ ಒಂಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ದೊಡ್ಡ ಮುಸ್ಲಿಂ ಸಂಘಟನೆಗಳನ್ನು ಸಂಪರ್ಕಿಸಿ, ಎಂದರು.

ಈ ಕುರಿತು ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ ಸಿಂಗ್ ಮಾತನಾಡಿ, ವಿಮಾನ ನಿಲ್ದಾಣದ ಒಳಗಿರುವ ಈ ಮಸೀದಿಯು ಬಹಳ ದಿನಗಳಿಂದ ವಿವಾದದ ವಿಷಯವಾಗಿದೆ. ಇದರಿಂದಾಗಿ ವಿಮಾನಗಳ ಸಂಚಾರಕ್ಕೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ನಾವು ಹಲವು ಬಾರಿ ಸರಕಾರಕ್ಕೆ ತಿಳಿಸಿದ್ದೇವೆ. ಈ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶ ಬರಲಿದೆ ಎಂಬ ಭರವಸೆ ನಮಗಿದೆ, ಎಂದು ಹೇಳಿದರು.

ತಪಾಸಣೆಯ ನಂತರ ನಮಾಜ್ ಮಾಡುವವರು ಬಸ್ಸಿನಲ್ಲಿ ಹೋಗುತ್ತಾರೆ

ಪ್ರಸ್ತುತ ದಿನಕ್ಕೆ 5 ಬಾರಿ ನಮಾಜ್ ಮಾಡಲು 10 ರಿಂದ 25 ಸ್ಥಳೀಯ ಮುಸ್ಲಿಮರು ಇಲ್ಲಿಗೆ ಬರುತ್ತಾರೆ. ಪ್ರವೇಶ ದ್ವಾರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು ಅವರನ್ನು ಕೂಲಂಕಷವಾಗಿ ತಪಾಸಣೆ ಮಾಡುತ್ತದೆ. ತದನಂತರ ಅವರನ್ನು ಒಂದು ವಿಶೇಷ ಬಸ್ಸಿನಲ್ಲಿ ರನ್‌ ವೇ ದಾಟಿಸಿ ಮಸೀದಿಯವರೆಗೆ ಕರೆದೊಯ್ಯಲಾಗುತ್ತದೆ ಮತ್ತು ನಮಾಜ್ ಮುಗಿದ ನಂತರ ಮತ್ತೆ ಬಸ್ಸಿನಲ್ಲೇ ಪ್ರವೇಶ ದ್ವಾರದವರೆಗೆ ಕರೆತರಲಾಗುತ್ತದೆ. ಶುಕ್ರವಾರದ ನಮಾಜಿನ ಸಮಯದಲ್ಲಿ ಈ ಸಂಖ್ಯೆ 80 ರವರೆಗೆ ತಲುಪುತ್ತದೆ. (ಮುಸ್ಲಿಮರ ಅತಿಯಾದ ಓಲೈಕೆಯ ಕಾರಣದಿಂದಲೇ ಇಲ್ಲಿಯವರೆಗೆ ಇದನ್ನು ಮುಂದುವರಿಯಲು ಬಿಡಲಾಗಿತ್ತು. ಈ ಮಸೀದಿಯನ್ನು ಈಗ ತೆರವುಗೊಳಿಸಲೇಬೇಕು ಎಂದು ಯಾವುದೇ ಪ್ರಾಯೋಗಿಕವಾಗಿ ಯೋಚಿಸುವ ರಾಷ್ಟ್ರಪ್ರೇಮಿ ನಾಗರಿಕನಿಗೆ ಅನಿಸುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಮುಸ್ಲಿಮರ ಓಲೈಕೆಯ ಕಾರಣದಿಂದಲೇ ಇವೆಲ್ಲವೂ ಮುಂದುವರಿದಿವೆ. ಸಾರ್ವಜನಿಕರನ್ನು ಅಪಾಯಕ್ಕೆ ದೂಡುತ್ತಿರುವ, ಇದಕ್ಕೆ ಕಾರಣರಾದ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಈಗ ಕ್ರಮ ಕೈಗೊಳ್ಳಬೇಕು!