ಲಾತೂರ್‌ನ ಪ್ರಸಿದ್ಧ ಮಕ್ಕಳ ತಜ್ಞ ಡಾ. ಮನೋಜ್ ಶಿರೂರೆ ಬಂಧನ!

  • ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

  • ಸ್ವಂತ ಮಗನಿಗಾಗಿ ಪ್ರಾಧ್ಯಾಪಕ ಶಿವರಾಜ್ ಮೋಟೆಗಾಂವ್ಕರ್‌ನಿಂದ ಪ್ರಶ್ನೆಪತ್ರಿಕೆ ಖರೀದಿಸಿದ ಆರೋಪ

  • ಇದೇ ಮೊದಲ ಬಾರಿಗೆ ಪೋಷಕರೊಬ್ಬರ ಬಂಧನ

ಲಾತೂರ್ – ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಯ ಪೋಷಕರ ನೇರ ಭಾಗೀದಾರಿಕೆ ಬೆಳಕಿಗೆ ಬಂದಿದ್ದು, ಕೇಂದ್ರೀಯ ತನಿಖಾ ದಳ (ಸಿಬಿಐ) ಲಾತೂರ್‌ನ ಪ್ರಸಿದ್ಧ ಮಕ್ಕಳ ತಜ್ಞ ಡಾ. ಮನೋಜ್ ಶಿರೂರೆ ಅವರನ್ನು ಬಂಧಿಸಿದೆ. ತನ್ನ ಮಗನಿಗೆ ಪರೀಕ್ಷೆಯಲ್ಲಿ ಅಕ್ರಮವಾಗಿ ಲಾಭ ಮಾಡಿಕೊಡಲು ಮುಖ್ಯ ಆರೋಪಿ ಪ್ರಾಧ್ಯಾಪಕ ಶಿವರಾಜ್ ಮೋಟೆಗಾಂವ್ಕರ್‌ನಿಂದ ಪ್ರಶ್ನೆಪತ್ರಿಕೆ ಖರೀದಿಸಿದ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಪೋಷಕರೊಬ್ಬರನ್ನು ಬಂಧಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಡಾ. ಮನೋಜ್ ಶಿರೂರೆ ಲಾತೂರ್‌ನ ಜುನಾ ಔಸಾ ರೋಡ್ ಪ್ರದೇಶದಲ್ಲಿರುವ ‘ಸಿದ್ಧಿವಿನಾಯಕ ಮಕ್ಕಳ ಆಸ್ಪತ್ರೆ’ಯ ನಿರ್ದೇಶಕರಾಗಿದ್ದಾರೆ. ಸಿಬಿಐ ತಂಡವು ಮೇ 17 ರಿಂದ ಲಾತೂರ್‌ನಲ್ಲಿ ಬೀಡು ಬಿಟ್ಟಿದ್ದು, ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಸಿಬಿಐ ಅಧಿಕಾರಿಗಳು ಡಾ. ಶಿರೂರೆ ಅವರ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಸತತ ನಾಲ್ಕುವರೆ ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೆಲವು ಪ್ರಮುಖ ದಾಖಲೆಗಳು, ಶಂಕಾಸ್ಪದ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ನಂತರ, ಡಾ. ಶಿರೂರೆ ಅವರಿಗೆ ಮುಖ್ಯ ಆರೋಪಿ ಪ್ರಾ. ಶಿವರಾಜ್ ಮೋಟೆಗಾಂವ್ಕರ್ ಮತ್ತು ಪಿ.ವಿ. ಕುಲಕರ್ಣಿ ಎಂಬ ಇಬ್ಬರು ಆರೋಪಿಗಳೊಂದಿಗೆ ನೇರ ಸಂಪರ್ಕ ಇರುವುದು ಪತ್ತೆಯಾಗಿದೆ.

ಈ ಪ್ರಶ್ನೆಪತ್ರಿಕೆಗಳಿಗೆ ಯಾವುದೇ ನಿಗದಿತ ಬೆಲೆ ಇರಲಿಲ್ಲ. ಪೋಷಕರ ಆರ್ಥಿಕ ಸ್ಥಿತಿಯನ್ನು ನೋಡಿ 5 ಲಕ್ಷದಿಂದ 50 ಲಕ್ಷ ರೂಪಾಯಿಗಳವರೆಗೆ ವ್ಯವಹಾರ ಕುದುರಿಸಲಾಗುತ್ತಿತ್ತು. ಆರಂಭದಲ್ಲಿ ಕೇವಲ ಮುಂಗಡ ಹಣವನ್ನು (ಟೋಕನ್ ಮನಿ) ಪಡೆಯಲಾಗುತ್ತಿತ್ತು. ಉತ್ತರ ಪತ್ರಿಕೆಗಳು ಬಂದ ನಂತರ ಪ್ರಶ್ನೆಗಳು ಹೊಂದಿಕೆಯಾದರೆ ಮಾತ್ರ ಬಾಕಿ ಹಣವನ್ನು ನೀಡಬೇಕು ಎಂಬ ಒಪ್ಪಂದವಿತ್ತು. ಬಾಕಿ ಹಣದ ಭರವಸೆಗಾಗಿ ಪೋಷಕರಿಂದ ಸಹಿ ಮಾಡಿದ ಖಾಲಿ ಚೆಕ್‌ಗಳು ಮತ್ತು ವಿದ್ಯಾರ್ಥಿಗಳ ಮೂಲ ಶೈಕ್ಷಣಿಕ ದಾಖಲೆಗಳನ್ನು ಅಡಮಾನವಾಗಿ ಇಟ್ಟುಕೊಳ್ಳಲಾಗುತ್ತಿತ್ತು.

ಈ ಪ್ರಕರಣದ ಮುಖ್ಯ ಸೂತ್ರಧಾರ ಮತ್ತು ಲಾತೂರ್‌ನ ‘ಆರ್.ಸಿ.ಸಿ. ಕೋಚಿಂಗ್ ಕ್ಲಾಸ್’ ನಿರ್ದೇಶಕ ಪ್ರಾ. ಶಿವರಾಜ್ ಮೋಟೆಗಾಂವ್ಕರ್ ಈ ಕಪ್ಪು ಹಣದ ಬಲದಿಂದ ಲಾತೂರ್‌ನ ಖೋಪೆಗಾಂವ್ ಶಿವಾರ್‌ನಲ್ಲಿ 8 ಎಕರೆ ಭೂಮಿಯಲ್ಲಿ ದೊಡ್ಡ ಶಾಲೆ ಮತ್ತು ಕಾಲೇಜು ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದನು. ಅಲ್ಲಿ ಬಹುವಿಡಿ ಕಟ್ಟಡದ ಕೆಲಸವೂ ವೇಗವಾಗಿ ನಡೆಯುತ್ತಿತ್ತು. ಸಿಬಿಐ ಈಗ ಆತನ ಹಣದ ಮೂಲ ಮತ್ತು ಭೂಮಿ ಖರೀದಿ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈ ಕ್ರಮದ ಭಾಗವಾಗಿ ಪುಣೆ ಮಹಾನಗರ ಪಾಲಿಕೆಯು ಪ್ರಾ. ಮೋಟೆಗಾಂವ್ಕರ್‌ನ ‘ಆರ್.ಸಿ.ಸಿ.’ ತರಗತಿಗಳಿಗೆ ಬೀಗ ಮುದ್ರೆ ಹಾಕಿದೆ.

ಅಂಬಾಜೋಗೈನ ಇಬ್ಬರು ವಿದ್ಯಾರ್ಥಿಗಳ ವಿಚಾರಣೆ ಪ್ರಗತಿಯಲ್ಲಿ!

ದೆಹಲಿಯ ‘ರೌಸ್ ಅವೆನ್ಯೂ’ ನ್ಯಾಯಾಲಯವು ಈ ಪ್ರಕರಣದ ಆರೋಪಿಗಳಾದ ಮಾಂಗಿಲಾಲ್ ಖಟೀಕ್, ವಿಕಾಸ್ ಬಿವಾಲ್, ದಿನೇಶ್ ಬಿವಾಲ್, ಯಶ್ ಯಾದವ್ ಮತ್ತು ಧನಂಜಯ್ ಲೋಖಂಡೆ ಅವರಿಗೆ ಜೂನ್ 2 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ, ಆದರೆ ಶುಭಂ ಖೈರ್ನಾರ್‌ನ ಸಿಬಿಐ ಕಸ್ಟಡಿಯನ್ನು 5 ದಿನಗಳವರೆಗೆ ವಿಸ್ತರಿಸಿದೆ. ಮತ್ತೊಂದೆಡೆ, ಅಂಬಾಜೋಗೈನ ಇಬ್ಬರು ವಿದ್ಯಾರ್ಥಿಗಳ ವಿಚಾರಣೆ ನಡೆಯುತ್ತಿದ್ದು, ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಮನೀಷಾ ಮಾಂಢರೆ, ಮನೀಷಾ ವಾಗ್ಮಾರೆ ಮತ್ತು ಧನಂಜಯ್ ಲೋಖಂಡೆ ಅವರನ್ನು ಪುಣೆಗೆ ಕರೆತಂದು ಮುಖಾಮುಖಿ ವಿಚಾರಣೆ ನಡೆಸಲಾಗುತ್ತಿದೆ. ಕೋಟ್ಯಂತರ ರೂಪಾಯಿಗಳ ಆರ್ಥಿಕ ವ್ಯವಹಾರ ನಡೆಸಿದ ಇನ್ನು ಕೆಲವು ಪೋಷಕರನ್ನೂ ಸಹ ಪುಣೆಯ ಸಿಬಿಐ ಕಚೇರಿಗೆ ವಿಚಾರಣೆಗಾಗಿ ಕರೆಯಿಸಲಾಗಿದೆ.

ಕೇಂದ್ರ ಶಿಕ್ಷಣ ಸಚಿವರಿಂದ ‘ನೀಟ್’ ಪರೀಕ್ಷಾ ಸಿದ್ಧತೆಗಳ ಪರಿಶೀಲನೆ!

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮುಂಬರುವ ‘ನೀಟ್’ ಪರೀಕ್ಷೆಯ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಸಾಮಾಜಿಕ ಮಾಧ್ಯಮ ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವದಂತಿಗಳನ್ನು ಮತ್ತು ದಿಕ್ಕು ತಪ್ಪಿಸುವ ದೂರುಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪೋಷಕರು ಪ್ರಶ್ನೆಪತ್ರಿಕೆಗಳನ್ನು ಖರೀದಿಸುವ ಮೂಲಕ ತಮ್ಮ ಮಕ್ಕಳ ಜೊತೆಗೆ ಉಳಿದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ. ಇಂತಹ ಪೋಷಕರ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.