ಮಹಾರಾಷ್ಟ್ರದಲ್ಲಿ ಗಂಭೀರ ಅಪರಾಧಗಳ ಪ್ರಕರಣಗಳ ತೀರ್ಪಿನ ಸ್ಥಿತಿ ಚಿಂತಾಜನಕ!

ಅತ್ಯಾಚಾರ, ಕೊಲೆ ಮುಂತಾದವುಗಳಿಗಾಗಿ ತ್ವರಿತಗತಿ ನ್ಯಾಯಾಲಯಗಳ ಬೇಡಿಕೆ, ವಾಸ್ತವದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ!

ಮುಂಬಯಿ – ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳು, ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಮುಂತಾದ ಗಂಭೀರ ಸ್ವರೂಪದ ಅಪರಾಧಗಳ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ. ಅಮಾನವೀಯ, ಅಮಾನುಷ ಮತ್ತು ಕ್ರೂರ ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗಲಿ ಎಂಬ ಉದ್ದೇಶದಿಂದ ನಾಗರಿಕರು ರಸ್ತೆಗೆ ಇಳಿದು ಇಂತಹ ಪ್ರಕರಣಗಳನ್ನು ತ್ವರಿತಗತಿ ನ್ಯಾಯಾಲಯಗಳಲ್ಲಿ ನಡೆಸಬೇಕೆಂದು ಒತ್ತಾಯಿಸುತ್ತಾರೆ. ಆದರೆ ವಾಸ್ತವದಲ್ಲಿ ತ್ವರಿತಗತಿ ನ್ಯಾಯಾಲಯಗಳಲ್ಲಿಯೂ ತೀರ್ಪಿಗಾಗಿ ಪ್ರಕರಣಗಳು ವರ್ಷಾನುಗಟ್ಟಲೆ ನೆನೆಗುದಿಗೆ ಬಿದ್ದಿವೆ. ಮಹಾರಾಷ್ಟ್ರದ ತ್ವರಿತಗತಿ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಸೇರಿ ಒಟ್ಟು ೧ ಲಕ್ಷದ ೬೧ ಸಾವಿರದ ೯೩೭ ಪ್ರಕರಣಗಳು ಬಾಕಿ ಇವೆ. ಈ ಅಂಕಿ-ಅಂಶವು ಆಗಸ್ಟ್ ೨೦೨೫ ರ ವರೆಗಿನದ್ದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಅಥವಾ ಇಳಿಕೆಯಾಗಿರುವ ಸಾಧ್ಯತೆಯಿದೆ.

ಶ್ರೀ ಪ್ರೀತಂ ನಾಚಣಕರ್, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ

​’ಸನಾತನ ಪ್ರಭಾತ’ದ ವಿಶೇಷ ಪ್ರತಿನಿಧಿ ಶ್ರೀ. ಪ್ರೀತಂ ನಾಚಣಕರ್ ಅವರು ಮಾಹಿತಿ ಹಕ್ಕು ಕಾಯಿದೆಯಡಿ  ತ್ವರಿತಗತಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ  ಮಾಹಿತಿ ಕೇಳಿದ್ದರು. ಇದಕ್ಕೆ ಮುಂಬಯಿ ಉಚ್ಚ ನ್ಯಾಯಾಲಯವು ಈ ಅಧಿಕೃತ ಅಂಕಿ-ಅಂಶಗಳನ್ನು ನೀಡಿದೆ. ಮುಂಬಯಿ ಉಚ್ಚ ನ್ಯಾಯಾಲಯದಿಂದ ಲಭ್ಯವಾದ ಮಾಹಿತಿಯ ಪ್ರಕಾರ, ೧೧ನೇ ಹಣಕಾಸು ಆಯೋಗದ ಅಡಿಯಲ್ಲಿ ೮೧ ಮತ್ತು ೧೪ನೇ ಹಣಕಾಸು ಆಯೋಗದ ಅಡಿಯಲ್ಲಿ ೨೧, ಹೀಗೆ ಮಹಾರಾಷ್ಟ್ರದಲ್ಲಿ ಪ್ರಸ್ತುತ ಒಟ್ಟು ೧೦೨ ತ್ವರಿತಗತಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳ ಅವಧಿಯು ಮಾರ್ಚ್ ೨೦೨೭ ರವರೆಗೆ ಇದೆ. (ಅವಧಿ ಮುಗಿದ ನಂತರ ಕಾನೂನು ಮತ್ತು ನ್ಯಾಯ ಇಲಾಖೆಯ ಮೂಲಕ ರಾಜ್ಯ ಸರಕಾರವು ನ್ಯಾಯಾಲಯಗಳ ಅವಧಿಯನ್ನು ವಿಸ್ತರಿಸುತ್ತದೆ ಮತ್ತು ಅದಕ್ಕಾಗಿ ಸರಕಾರದಿಂದ ಆರ್ಥಿಕ ಅನುದಾನವನ್ನು ನೀಡಲಾಗುತ್ತದೆ.)

೮ ರಿಂದ ೧೦ ವರ್ಷಗಳಿಂದ ಪ್ರಕರಣಗಳು ಬಾಕಿ!

ಇದರಲ್ಲಿ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ೫೯ ಸಾವಿರದ ೮೮೭ ಆಗಿದೆ. ಇದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಶೋಷಣೆಯ ಪ್ರಕರಣಗಳೂ ಸೇರಿವೆ. ಇಂತಹ ಪ್ರಕರಣಗಳ ನಿಖರ ಸಂಖ್ಯೆ ಲಭ್ಯವಾಗಿಲ್ಲ; ಆದರೆ ಬಾಕಿ ಇರುವ ಒಟ್ಟು ಪ್ರಕರಣಗಳ ಪ್ರಮಾಣವನ್ನು ನೋಡಿದರೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಯ ಪ್ರಕರಣಗಳ ಸಂಖ್ಯೆಯು ಸಾವಿರಾರು ಇರಬಹುದು ಎಂದು ಅಂದಾಜಿಸಲಾಗಿದೆ. ಗಂಭೀರವಾದ ವಿಷಯವೆಂದರೆ ನ್ಯಾಯಾಧೀಶರ ಕೊರತೆ, ಸಾಕ್ಷಿಗಳ ಅನುಪಸ್ಥಿತಿ, ತನಿಖಾ ಸಂಸ್ಥೆಗಳಿಂದ ತನಿಖೆಯಲ್ಲಿ ವಿಳಂಬ ಮತ್ತು ಆರೋಪಪಟ್ಟಿ  ಸಲ್ಲಿಕೆಯಲ್ಲಿ ಆಗುವ ವಿಳಂಬದಿಂದಾಗಿ ಕೆಲವು ಪ್ರಕರಣಗಳು ೮ ರಿಂದ ೧೦ ವರ್ಷಗಳಿಂದ ಬಾಕಿ ಇವೆ. ಇದು ಅತ್ಯಂತ ಚಿಂತಾಜನಕ ವಿಷಯವಾಗಿದೆ. ಸರಕಾರವು ಈ ಬಗ್ಗೆ ಗಂಭೀರವಾಗಿ ಕ್ರಮಗಳನ್ನು ಕೈಗೊಳ್ಳುವುದು  ಅಪೇಕ್ಷಿತವಾಗಿದೆ.