ಭಕ್ತಿಯ ಪ್ರಸಾರ ಮಾಡಿದ ರಾಮಾನುಜಾಚಾರ್ಯರು !

ಏಪ್ರಿಲ್‌ ೨೨ ರಂದು ರಾಮಾನುಜಾಚಾರ್ಯರ ಜಯಂತಿಯಿದೆ. ಆ ನಿಮಿತ್ತ...

ವೈಶಾಖ ಶುಕ್ಲ ಪಂಚಮಿಯ ದಿನದಂದು ‘ವಿಶಿಷ್ಟಾದ್ವೈತ’ ಮತದ ಪ್ರಮುಖ ಆಚಾರ್ಯ ರಾಮಾನುಜಾಚಾರ್ಯರು ತಿರುಪತಿಯಲ್ಲಿ ಅಸೂರಿ ಕೇಶವ ಭಟ್ಟರ ಮನೆಯಲ್ಲಿ ಜನಿಸಿದರು. ರಾಮಾನುಜರು ಕಾಂಜೀವರಂನ ಯಾದವ ಪ್ರಕಾಶರ ಬಳಿ ಅಧ್ಯಯನ ಮಾಡಿದರು; ಆದರೆ ಮುಂದೆ ಅವರಿಗೆ ಗುರುಗಳೊಂದಿಗೆ ಹೊಂದಿಕೆಯಾಗಲಿಲ್ಲ. ಮೊದಲಿನಿಂದಲೂ ರಾಮಾನುಜಾಚಾರ್ಯರ ಒಲವು ವಿಶಿಷ್ಟಾದ್ವೈತದ ಕಡೆಗೆ ಇದ್ದುದರಿಂದ, ಅವರು ಆಳ್ವಾರರ ಪ್ರಬಂಧಗಳ ಅಧ್ಯಯನವನ್ನು ಪ್ರಾರಂಭಿಸಿದರು ಮತ್ತು ಹುಣಸೆಮರದ ಕೆಳಗೆ ಕುಳಿತು ರಾಮನ ಭಕ್ತಿಯನ್ನು ಮಾಡಲು ಆರಂಭಿಸಿದರು. ಕಾವೇರಿ ತೀರದಲ್ಲಿ ಯಮುನಾಚಾರ್ಯರ ಅಂತ್ಯಕ್ರಿಯೆಯ ಸಮಾರಂಭವನ್ನು ಸಾವಿರಾರು ವೈಷ್ಣವರು ಮಾಡುತ್ತಿರುವುದನ್ನು ಕಂಡು ಅವರಿಗೆ ವಿಷಾದವಾಯಿತು. ‘ಬ್ರಹ್ಮಸೂತ್ರದ ಮೇಲೆ ಭಾಷ್ಯ ಬರೆಯಬೇಕು’ ಎಂಬುದು ಯಮುನಾಚಾರ್ಯರ ಕೊನೆಯ ಇಚ್ಛೆಯಾಗಿತ್ತು. ರಾಮಾನುಜರು ಅದನ್ನು ಪೂರೈಸುವ ಪ್ರತಿಜ್ಞೆ ಮಾಡಿದರು. ತದನಂತರ ಅವರು ಕಾಂಚೀಪೂರ್ಣ ಮತ್ತು ಮಹಾಪೂರ್ಣ ಎಂಬ ಇಬ್ಬರು ಮಹಾನ್‌ ವ್ಯಕ್ತಿಗಳ ಬಳಿ ಅಧ್ಯಯನ ಮಾಡಿದರು.

ರಾಮಾನುಜರು ಉದಾರ ಮನಸ್ಸಿನವರು, ಶ್ರದ್ಧಾವಂತರು ಮತ್ತು ಅತೀವ ಬುದ್ಧಿವಂತರು ಆಗಿದ್ದರು. ಪತ್ನಿಯು ಎರಡು-ಮೂರು ಬಾರಿ ಮನಸ್ಸಿಗೆ ವಿರುದ್ಧವಾಗಿ ವರ್ತಿಸಿದ ಕಾರಣ ಅವರು ಸಂನ್ಯಾಸವನ್ನು ಸ್ವೀಕರಿಸಿದರು. ಅವರ ಸುತ್ತಲೂ ಕುರೇಶ, ದಶರಥಿ, ಗೋವಿಂದಯತಿ, ಗೋವಿಂದಭಟ್ಟ, ಯಜ್ಞಮೂರ್ತಿ ಮುಂತಾದ ಶಿಷ್ಯರು ಸೇರಿದರು. ರಾಮಾನುಜರು ತಮ್ಮ ತತ್ವಜ್ಞಾನವನ್ನು ‘ವೇದಾರ್ಥಸಂಗ್ರಹ’ ಎಂಬ ಗ್ರಂಥದಲ್ಲಿ ತಿಳಿಸಿದ್ದಾರೆ. ‘ಉಪನಿಷತ್ತುಗಳಲ್ಲಿನ ತತ್ತ್ವಜ್ಞಾನವು ದ್ವೈತಪರವಾಗಿದೆ’ ಎಂದು ಪ್ರತಿಪಾದಿಸುವಾಗ ಅವರು ಶಂಕರಾಚಾರ್ಯರನ್ನು ಟೀಕಿಸಿದ್ದಾರೆ.

ವೇದಾಂತಸೂತ್ರಗಳ ಮೇಲಿನ ‘ಭಾಷ್ಯ’ ಇವರ ಪ್ರಮುಖ ಗ್ರಂಥ ! ಅದೇ ರೀತಿ ‘ವೇದಾಂತಸಾರ’, ‘ವೇದಾಂತದೀಪ’, ‘ಗೀತಾಭಾಷ್ಯ’ ಮುಂತಾದ ಗ್ರಂಥಗಳನ್ನು ರಾಮಾನುಜರು ಬರೆದಿದ್ದಾರೆ. ರಾಮಾನುಜರು ಶ್ರೀರಂಗಂ, ಕುಂಭಕೋಣಂ, ತಿರುಮಂಗೈ, ಮಲಬಾರ್, ತ್ರಾವಂಕೂರ್, ಗಿರ್ನಾರ್, ದ್ವಾರಕಾ, ಮಥುರಾ, ಬದ್ರಿನಾರಾಯಣ ಸೇರಿದಂತೆ ಭಾರತದಾದ್ಯಂತದ ಎಲ್ಲಾ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ತಮ್ಮ ತತ್ತ್ವಗಳನ್ನು ಪ್ರಸಾರ ಮಾಡಿದರು.

ರಾಮಾನುಜರು ಶ್ರೇಷ್ಠ ಪುರುಷರಾಗಿದ್ದರು. ಅವರು ಎಲ್ಲಾ ಸ್ತರದ ಮತ್ತು ಜಾತಿಯ ಜನರನ್ನು ಭಕ್ತಿಮಾರ್ಗಕ್ಕೆ ಕರೆತಂದರು. ಅವರು ಕಟ್ಟುನಿಟ್ಟಿನ ಸ್ವಭಾವದವರಾಗಿದ್ದರೂ ಅಷ್ಟೇ ಪ್ರೇಮಮಯಿ ಮತ್ತು ಜನರನ್ನು ಒಗ್ಗೂಡಿಸಿದರು. ಅವರ ಭಕ್ತಿಯು ಅನುಪಮವಾಗಿತ್ತು.

(ಕೃಪೆ : ‘ದಿನವಿಶೇಷ’ (ಭಾರತೀಯ ಇತಿಹಾಸದ ತಿಥಿವಾರು ದರ್ಶನ)