ಮುಂಬಯಿ: ದಯಾಮರಣಕ್ಕಾಗಿ 85 ಅರ್ಜಿಗಳು!

ಮುಂಬಯಿ – ಹರೀಶ್ ರಾಣಾ ಅವರ ದಯಾಮರಣದ ಪ್ರಕರಣದ ನಂತರ ಮುಂಬಯಿ ಮಹಾನಗರ ಪಾಲಿಕೆಗೆ ಇದುವರೆಗೆ 85 ಜನರು ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ದಯಾಮರಣದ ಪರಿಕಲ್ಪನೆಗೆ ಕಾನೂನಿನ ಅಡಿಯಲ್ಲಿ ಇನ್ನೂ ಅನುಮತಿ ದೊರೆತಿಲ್ಲ. ಸದ್ಯಕ್ಕೆ ಈ ಬಗ್ಗೆ ಯಾವುದೇ ಮಾರ್ಗದರ್ಶಿ ಸೂತ್ರಗಳು ಲಭ್ಯವಿಲ್ಲ. ಆದ್ದರಿಂದ ಸಹಜವಾಗಿಯೇ, ‘ಈ ಅರ್ಜಿಗಳ ಬಗ್ಗೆ ಯಾವ ಧೋರಣೆ ತಳೆಯಬೇಕು ಅಥವಾ ಯಾವ ಪ್ರಕ್ರಿಯೆಯನ್ನು ಅನುಸರಿಸಬೇಕು?’, ಎಂಬ ಪ್ರಶ್ನೆ ಸರ್ಕಾರದ ಮುಂದೆ ನಿರ್ಮಾಣವಾಗಿದೆ. ಆತಂಕದ ವಿಷಯವೆಂದರೆ, ಈ ಅರ್ಜಿ ಹಾಕಿದವರಲ್ಲಿ ಕೆಲವರಿಗೆ ಪ್ರಸ್ತುತ ಯಾವುದೇ ಕಾಯಿಲೆಗಳಿಲ್ಲ; ಆದರೆ ಭವಿಷ್ಯದಲ್ಲಿ ಅಂತಹ ಗಂಭೀರ ಪರಿಸ್ಥಿತಿ ಎದುರಾದರೆ, ಆಧುನಿಕ ವೈದ್ಯರ ಸಲಹೆಯಂತೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಅವರು ಅರ್ಜಿಯ ಮೂಲಕ ವಿನಂತಿಸಿದ್ದಾರೆ.

ಇಂತಹ ಅರ್ಜಿಗಳ ಡಿಜಿಟಲ್ ನೋಂದಣಿಗಾಗಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಒಂದು ‘ಪೋರ್ಟಲ್’ ನಿರ್ಮಿಸಿದೆ; ಆದರೆ ಇನ್ನೂ ಮಹಾನಗರ ಪಾಲಿಕೆಯ ಸ್ಥರದಲ್ಲಿ ಆ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ.

ಹರೀಶ್ ರಾಣಾ ಅವರ ದಯಾಮರಣದ ಪ್ರಕರಣವೇನು?

11 ಮಾರ್ಚ್ 2026 ರಂದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ‘ಪ್ಯಾಸಿವ್ ಯೂಥನೇಷಿಯಾ’ (ನಿಷ್ಕ್ರಿಯ ದಯಾಮೃತ್ಯು), ಅಂದರೆ ಕೃತಕವಾಗಿ ನೀಡಲಾಗುತ್ತಿದ್ದ ಆಹಾರ ಮತ್ತು ಚಿಕಿತ್ಸೆಯನ್ನು ನಿಲ್ಲಿಸಲು ಅಧಿಕೃತ ಅನುಮತಿ ನೀಡಿತು. 13 ವರ್ಷಗಳಿಂದ ಅವರ ದೇಹವು 100% ನಿಷ್ಕ್ರಿಯಗೊಂಡಿತ್ತು ಮತ್ತು ಕೇವಲ ನಳಿಕೆಯ ಮೂಲಕ ನೀಡುವ ಆಹಾರದ ಮೇಲೆ ಅವರು ಜೀವಂತವಾಗಿದ್ದರು. ಆಹಾರ ಮತ್ತು ಚಿಕಿತ್ಸೆಯನ್ನು ನಿಲ್ಲಿಸಿದ ನಂತರ, ಹರೀಶ್ ರಾಣಾ ಅವರು 17 ಮಾರ್ಚ್‌ರಂದು ಕೊನೆಯುಸಿರೆಳೆದರು.