ಬಂಗಾಳ ಚುನಾವಣೆ: ಕೇಂದ್ರದ ೨,೦೦೦ ತುಕಡಿಗಳ ನಿಯೋಜನೆ ಸಾಧ್ಯತೆ !

ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಸುಮಾರು ಮೂರು ಪಟ್ಟು ಸೈನಿಕರಿಂದ ರಕ್ಷಣಾ ವ್ಯವಸ್ಥೆ

ನವ ದೆಹಲಿ – ಬಂಗಾಳದಲ್ಲಿ ಮುಂದಿನ ತಿಂಗಳು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೇಂದ್ರ ಅರೆಸೇನಾ ಪಡೆಗಳ ಇದುವರೆಗಿನ ಅತಿ ದೊಡ್ಡ ನಿಯೋಜನೆಯನ್ನು ಮಾಡಲಾಗುತ್ತಿದೆ. ೨೦೨೧ ರ ಚುನಾವಣೆಯಲ್ಲಿ ೭೫೦ ತುಕಡಿಗಳನ್ನು ನಿಯೋಜಿಸಲಾಗಿತ್ತು, ಅದಕ್ಕೆ ಹೋಲಿಸಿದರೆ ಈ ಬಾರಿ ಸುಮಾರು ಮೂರು ಪಟ್ಟು, ಅಂದರೆ ಬರೋಬ್ಬರಿ ೨,೦೦೦ ತುಕಡಿಗಳನ್ನು ನಿಯೋಜಿಸುವ ಸಾಧ್ಯತೆಯಿದೆ. ಕೇಂದ್ರ ಪಡೆಗಳ ಇಷ್ಟೊಂದು ದೊಡ್ಡ ಪ್ರಮಾಣದ ಬಳಕೆಯು ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಮತ್ತು ಚುನಾವಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಅಪೇಕ್ಷಿತವಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತದಾನದ ಪ್ರಕ್ರಿಯೆ ಆರಂಭವಾಗುವ ಮೊದಲೇ ಕೇಂದ್ರ ಸರಕಾರವು ಕೇಂದ್ರ ಪಡೆಗಳ ಸಾಧಾರಣ ೪೮೦ ತುಕಡಿಗಳನ್ನು ಬಂಗಾಳಕ್ಕೆ ಕಳುಹಿಸಿದೆ.

ಪಡೆಗಳ ನಿಯೋಜನೆಯ ಹೊರತಾಗಿ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಕಡೆಗೂ ವಿಶೇಷ ಗಮನ ನೀಡುತ್ತಿದೆ. ರಾಜ್ಯದ ಎಲ್ಲಾ ಮತದಾನ ಕೇಂದ್ರಗಳ ಸಂಪೂರ್ಣ ‘ವೆಬ್‌ಕಾಸ್ಟಿಂಗ್’ (ಅಂತರ್ಜಾಲದ ಮೂಲಕ ನೇರ ಪ್ರಸಾರ) ಮಾಡಲಾಗುವುದು, ಇದರಿಂದಾಗಿ ಅಧಿಕಾರಿಗಳು ಈ ಪ್ರಕ್ರಿಯೆಯ ಮೇಲೆ ‘ರಿಯಲ್-ಟೈಮ್’ನಲ್ಲಿ (ಪ್ರತ್ಯಕ್ಷವಾಗಿ ನಡೆಯುತ್ತಿರುವಾಗಲೇ) ನಿಗಾ ಇಡಬಹುದು. ಇದರಿಂದ ಚುನಾವಣಾ ಪ್ರಕ್ರಿಯೆಯು ನಿಷ್ಪಕ್ಷಪಾತವಾಗಿ ನಡೆಯಲಿದ್ದು, ಮತದಾರರ ವಿಶ್ವಾಸ ಹೆಚ್ಚಿಸಲು ಸಹಾಯವಾಗಲಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಕಳೆದ ಚುನಾವಣೆಯ ಸಮಯದಲ್ಲಿ ದೊಡ್ಡ ಹಿಂಸಾಚಾರ ನಡೆದಿತ್ತು. ತೃಣಮೂಲ ಕಾಂಗ್ರೆಸ್ ಮತಾಂಧರು, ಜಿಹಾದಿಗಳು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಅಭಯ ನೀಡಿದೆ. ಆದ್ದರಿಂದ ಮತದಾನವು ಶಾಂತಿಯುತವಾಗಿ ನಡೆಯಲು ಮೊದಲು ತೃಣಮೂಲ ಕಾಂಗ್ರೆಸ್‌ ನಲ್ಲಿರುವ ಸಮಾಜ ವಿರೋಧಿ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.