ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರರು ಇನ್ಮುಂದೆ ರಾಜ್ಯಸಭೆಗೆ! Bihar CM Nitish Rajya Sabha

ಹೊಸ ಮುಖ್ಯಮಂತ್ರಿ ಹೆಸರಿನ ಬಗ್ಗೆ ಚರ್ಚೆ; ವಿರೋಧ ಪಕ್ಷಗಳಿಂದ ಬಿಜೆಪಿ ವಿರುದ್ಧ ಟೀಕೆ


ಪಾಟಲಿಪುತ್ರ (ಬಿಹಾರ): ಸತತ 20 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ ಕುಮಾರ ಅವರು ಈಗ ರಾಜ್ಯಸಭೆಗೆ ತೆರಳಲಿದ್ದಾರೆ. ಮಾರ್ಚ್ 5ರ ಮಧ್ಯಾಹ್ನ ‘ಎಕ್ಸ್’ (ಟ್ವಿಟರ್) ಮೂಲಕ ಅವರು ಈ ಮಾಹಿತಿಯನ್ನು ನೀಡಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇದಕ್ಕಾಗಿ ಅವರು ರಾಜ್ಯಸಭಾ ಸದಸ್ಯತ್ವದ ನಾಮಪತ್ರವನ್ನೂ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕುಮಾರ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ ಶಾಹ ಮತ್ತು ಬಿಜೆಪಿಯ ನೂತನ ಅಧ್ಯಕ್ಷ ನಿತೀನ ನಬಿನರು ಉಪಸ್ಥಿತರಿದ್ದರು. ನಿತೀಶ ಕುಮಾರ ಅವರ ಈ ನಿರ್ಧಾರದಿಂದ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕಿಸುತ್ತಿದ್ದು, ಬಿಹಾರದಲ್ಲಿ ಬಿಜೆಪಿಯು ಮಹಾರಾಷ್ಟ್ರದ ಮಾದರಿಯಲ್ಲಿ ರಾಜಕೀಯದಾಟವಾಡುತ್ತಿದೆ ಎಂದು ಆರೋಪಿಸುತ್ತಿವೆ.

“ಬಿಹಾರದ ಹೊಸ ಸರಕಾರಕ್ಕೆ ನನ್ನ ಬೆಂಬಲ ಮತ್ತು ಮಾರ್ಗದರ್ಶನ ಇರಲಿದೆ!” – ನಿತೀಶ ಕುಮಾರ

ನಿತೀಶ ಕುಮಾರ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಾ ಮುಂದಿನಂತೆ ಹೇಳಿದ್ದಾರೆ, “ಕಳೆದ ಎರಡು ದಶಕಗಳಿಂದ ಬಿಹಾರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆ ಬಲದಿಂದಲೇ ನಾವು ಬಿಹಾರದ ಸೇವೆ ಮಾಡಿದ್ದೇವೆ. ಜನರ ವಿಶ್ವಾಸ ಮತ್ತು ಬೆಂಬಲದಿಂದಾಗಿಯೇ ಬಿಹಾರ ಇಂದು ಅಭಿವೃದ್ಧಿಯ ಹಾದಿಯಲ್ಲಿದೆ. ನನ್ನ ಸಂಸದೀಯ ವೃತ್ತಿಜೀವನದ ಆರಂಭದಿಂದಲೂ ಬಿಹಾರದ ವಿಧಾನಮಂಡಲದ ಎರಡೂ ಸದನಗಳು ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯನಾಗಬೇಕು ಎಂಬ ಆಸೆ ಇತ್ತು. ಹಾಗಾಗಿಯೇ ಈ ಬಾರಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ಬಿಹಾರದಲ್ಲಿ ಅಸ್ತಿತ್ವಕ್ಕೆ ಬರುವ ಹೊಸ ಸರಕಾರಕ್ಕೆ ನನ್ನ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಇರುತ್ತದೆ.”