ಹಿಂದೂಹೃದಯಸಾಮ್ರಾಟ ಬಾಳಾಸಾಹೇಬ ಠಾಕ್ರೆ ಅವರ ಜನ್ಮಶತಮಾನೋತ್ಸವ ವರ್ಷ – Balasaheb Thackeray Birth Anniversary

  • ಸೋಲಾಪುರದ ೬೭೦ ಶಾಲೆಗಳ ೪ ರಿಂದ ೮ ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ವಯಂರಕ್ಷಣೆಯ ವಿಶೇಷ ತರಬೇತಿ!

  • ಹುಡುಗಿಯರಿಗೆ ವಿವಿಧ ದೇಶಗಳ ಯುದ್ಧಕಲೆಗಳ ಬೋಧನೆ!

ಸೋಲಾಪುರ – ಹಿಂದೂಹೃದಯಸಾಮ್ರಾಟ ಬಾಳಾಸಾಹೇಬ ಠಾಕ್ರೆ ಅವರ ಜನ್ಮಶತಮಾನೋತ್ಸವದ ನಿಮಿತ್ತ ರಾಜ್ಯ ಸರಕಾರವು ‘ರಾಷ್ಟ್ರ ಪ್ರಥಮ’ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ೬೭೦ ಶಾಲೆಗಳ ೪ ರಿಂದ ೮ ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ವಯಂರಕ್ಷಣೆಯ ವಿಶೇಷ ತರಬೇತಿ ನೀಡಲು ನಿರ್ಧರಿಸಿದೆ. ಮಾಜಿ ಸೈನಿಕರ ಮೂಲಕ ವಿದ್ಯಾರ್ಥಿಗಳಿಗೆ ಸೈನಿಕ ಶಿಸ್ತನ್ನು ಕಲಿಸಲಾಗುವುದು. ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಅವರ ಪರಿಕಲ್ಪನೆಯ ಈ ಅಭಿಯಾನವು ಜನವರಿ ೧೫, ೨೦೨೬ ರಿಂದ ಆರಂಭವಾಗಿದ್ದು, ಮಾರ್ಚ್ ೨೦, ೨೦೨೬ ರವರೆಗೆ ಮುಂದುವರಿಯಲಿದೆ. ರಾಜ್ಯದಾದ್ಯಂತ ಇರುವ ವಿವಿಧ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ತರಬೇತಿ ಪ್ರಕ್ರಿಯೆ ನಡೆಯುತ್ತಿದೆ.

೧. ಹುಡುಗಿಯರನ್ನು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಸದೃಢಗೊಳಿಸಲು ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಇದರಲ್ಲಿ ಟೇಕ್ವಾಂಡೋ (ಕೊರಿಯಾದ ಪ್ರಸಿದ್ಧ ಸಮರಕಲೆ), ಕರಾಟೆ (ಜಪಾನ್‌ ನ ಪ್ರಸಿದ್ಧ ಸಮರಕಲೆ), ಜೂಡೋ (ಜಪಾನ್‌ ನ ಪ್ರಸಿದ್ಧ ಸಮರಕಲೆ), ಕ್ರಾವ್ ಮಗಾ (ಇಸ್ರೇಲ್‌ ನ ಸ್ವಯಂರಕ್ಷಣಾ ಕಲೆ) ಮತ್ತು ಬಾಕ್ಸಿಂಗ್‌ ನಂತಹ ಸಮರಕಲೆಗಳನ್ನು (ಮಾರ್ಶಲ್ ಆರ್ಟ್ಸ) ಅಳವಡಿಸಲಾಗಿದೆ. ಯೋಗಾಸನ ಮತ್ತು ಪ್ರಾಣಾಯಾಮದ ಮೂಲಕ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲಾಗುವುದು. ವ್ಯಕ್ತಿತ್ವ ವಿಕಸನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಒತ್ತಡ ನಿರ್ವಹಣೆಯಂತಹ ವಿಷಯಗಳನ್ನು ವಿದ್ಯಾರ್ಥಿನಿಯರಿಗೆ ಕಲಿಸಲಾಗುವುದು.

೨. ಶಾಲೆಗಳಲ್ಲಿ ಶಿಸ್ತು ಮತ್ತು ದೇಶಪ್ರೇಮದ ಭಾವನೆಯನ್ನು ಮೂಡಿಸಲು ಮಾಜಿ ಸೈನಿಕರು, ಎನ್.ಸಿ.ಸಿ.(ರಾಷ್ಟ್ರೀಯ ವಿದ್ಯಾರ್ಥಿ ಸೇನೆ) ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಕೆಡೆಟ್‌ ಗಳ ನೆರವು ಪಡೆಯಲಾಗುವುದು. ಈ ಸೈನಿಕರು ವಿದ್ಯಾರ್ಥಿಗಳಿಗೆ ಪಥಸಂಚಲನ ಮತ್ತು ಮೂರೂ ರಕ್ಷಣಾ ಪಡೆಗಳ (ಭೂಸೇನೆ, ನೌಕಾಸೇನೆ, ವಾಯುಸೇನೆ) ಬಗ್ಗೆ ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ವಿಚಾರಗಳ ಬಿತ್ತನೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

೩. ಸೋಲಾಪುರದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಸಮಯವನ್ನು ಮುಖ್ಯೋಪಾಧ್ಯಾಯರು ಮತ್ತು ಶಾಲಾ ಸಮಿತಿಗಳು ನಿರ್ಧರಿಸಲಿವೆ. ತರಬೇತಿಯ ಸಮಯದಲ್ಲಿ ಮಹಿಳಾ ಶಿಕ್ಷಕಿಯರು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಅನಾರೋಗ್ಯವಿರುವ ಹುಡುಗಿಯರಿಗೆ ಈ ತರಬೇತಿಯಿಂದ ವಿನಾಯಿತಿ ನೀಡಲಾಗುವುದು.

ಸಂಪಾದಕೀಯ ನಿಲುವು

ರಾಜ್ಯ ಸರಕಾರದ ಶ್ಲಾಘನೀಯ ಪ್ರಯತ್ನ! ಸೋಲಾಪುರದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿನಿಯರಿಗೂ ಇಂತಹ ವಿಶೇಷ ತರಬೇತಿ ಸಿಗುವಂತಾಗಬೇಕು. ಅದಕ್ಕಾಗಿ ಸರಕಾರವು ಶ್ರಮಿಸಬೇಕು!