ಭಾಗ್ಯನಗರ (ತೆಲಂಗಾಣ)ದಲ್ಲಿ ಅಪರಿಚಿತರಿಂದ ದೇವಸ್ಥಾನ ಧ್ವಂಸ: ನಂತರ ಭುಗಿಲೆದ್ದ ಹಿಂಸಾಚಾರ : Bhagyanagar Violence

10 ಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಪುರಾಣಾಪೂಲ್ ದರ್ವಾಜಾ ಸಮೀಪ ಜನವರಿ 14 ರ ತಡರಾತ್ರಿ ಅಪರಿಚಿತ ವ್ಯಕ್ತಿಗಳು ದೇವಸ್ಥಾನವೊಂದನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನ ಧ್ವಂಸದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ನಾಗರಿಕರಲ್ಲಿ ಆತಂಕ ಮೂಡಿತು ಮತ್ತು ಘಟನಾ ಸ್ಥಳದಲ್ಲಿ ಭಾರಿ ಜನಸಮೂಹ ಜಮಾಯಿಸಿತು. ಆಕ್ರೋಶಗೊಂಡ ಜನಸಮೂಹದಿಂದ ಕಲ್ಲು ತೂರಾಟ ನಡೆಸಲಾಗಿದ್ದು, ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿಂಸಾಚಾರದಲ್ಲಿ 10 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಸದ ಅಸಾದುದ್ದೀನ್ ಓವೈಸಿ ಕೂಡ ಸ್ಥಳಕ್ಕೆ ಭೇಟಿ ನೀಡಿದರು.

ಜನಸಮೂಹದಿಂದ ಕಬ್ರ ಧ್ವಂಸ

ಪೊಲೀಸರ ಮಾಹಿತಿಯ ಪ್ರಕಾರ, ದೇವಸ್ಥಾನದ ಧ್ವಂಸದಿಂದ ಆಕ್ರೋಶಗೊಂಡ ಜನಸಮೂಹ ಘೋಷಣೆಗಳನ್ನು ಕೂಗಿದ್ದರಿಂದ ಉದ್ವಿಗ್ನತೆ ಹೆಚ್ಚಾಯಿತು. ನಂತರ ಹತ್ತಿರದ ಅನ್ಯಧರ್ಮೀಯರ ಧಾರ್ಮಿಕ ಸ್ಥಳದ ಮೇಲೆ ದಾಳಿ ನಡೆಸಲಾಯಿತು, ಹಾಗೂ ಅಲ್ಲಿದ್ದ ಕಬ್ರವನ್ನು ಧ್ವಂಸಗೊಳಿಸಲಾಯಿತು. ಧಾರ್ಮಿಕ ಧ್ವಜಕ್ಕೂ ಹಾನಿ ಮಾಡಲಾಗಿದೆ. ಈ ವೇಳೆ ಎರಡೂ ಕಡೆಯ ಗುಂಪುಗಳು ಮುಖಾಮುಖಿಯಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಪ್ರಸ್ತುತ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪುರಾಣಾಪೂಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಂಸದ ಅಸಾದುದ್ದೀನ್ ಓವೈಸಿ ಅವರು ಜನವರಿ 15 ರ ಬೆಳಿಗ್ಗೆ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅವರು ನಾಗರಿಕರಿಗೆ ಶಾಂತಿ ಕಾಪಾಡುವಂತೆ ಮತ್ತು ಆಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರಕಾರದ ವಿರುದ್ಧ ಭಾಜಪದ ಟೀಕೆ

ತೆಲಂಗಾಣ ಭಾಜಪ ತನ್ನ ‘ಎಕ್ಸ್’ (X) ಖಾತೆಯಲ್ಲಿ ದೇವಸ್ಥಾನದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತವಾಗಿರುತ್ತವೆ ಎಂಬುದನ್ನು ಗಮನಿಸಿ!