ಭೂ-ಮಾಫಿಯಾದವರು ಅಕ್ರಮವಾಗಿ ವಶಪಡಿಸಿಕೊಂಡಿದ್ದ ನಿವೃತ್ತ ಸೇನಾಧಿಕಾರಿಯ ಮನೆಯನ್ನು ಅವರ ಪುತ್ರಿಗೆ ೨೪ ಗಂಟೆಗಳಲ್ಲಿ ಮರಳಿ ಕೊಡಿಸಿದರು ! UP CM Yogi Action Land Mafia

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಸಂತ್ರಸ್ತೆಗೆ ತಕ್ಷಣ ನ್ಯಾಯ !

  • ಇಬ್ಬರು ಆರೋಪಿಗಳ ಬಂಧನ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ಭೂ-ಮಾಫಿಯಾದವರು ಸೇನಾ ಪಡೆಯ ನಿವೃತ್ತ ಮೇಜರ್ ಬಿಪಿನ್ ಚಂದ್ರ ಭಟ್ ಅವರ ಮನೆಯನ್ನು ಅಕ್ರಮವಾಗಿ ಕಬಳಿಸಿದ್ದರು. ಮೇಜರ್ ಭಟ್ ಅವರ ಪುತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಇಡೀ ಘಟನೆಯ ಮಾಹಿತಿಯನ್ನು ನೀಡಿದರು. ಮುಖ್ಯಮಂತ್ರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಲ್ಲದೆ, ಸ್ವತಃ ಬೆನ್ನುಬಿದ್ದು ಕೇವಲ ೨೪ ಗಂಟೆಗಳಲ್ಲಿ ಸಂತ್ರಸ್ತೆಗೆ ಆಕೆಯ ಮನೆಯನ್ನು ಮರಳಿ ಕೊಡಿಸಿದರು. ಅಲ್ಲದೆ, ಮನೆಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

೧. ಲಕ್ಷ್ಮಣಪುರಿಯ ಇಂದಿರಾನಗರ ಪ್ರದೇಶದಲ್ಲಿ ಸೇನಾ ಪಡೆಯ ಮೇಜರ್ (ನಿವೃತ್ತ) ಬಿಪಿನ ಚಂದ್ರ ಭಟ್ ಅವರ ಮನೆಯಿತ್ತು. ಸೇನೆಯಿಂದ ನಿವೃತ್ತರಾದನಂತರ ಅವರು ೧೯೯೪ ರಲ್ಲಿ ನಿಧನರಾದರು. ಅವರ ಪುತ್ರಿ ಅಂಜನಾ ದೀರ್ಘಕಾಲ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಪುನರ್ವಸತಿ ಕೇಂದ್ರದಲ್ಲಿದ್ದರು. ಈ ಪರಿಸ್ಥಿತಿಯ ದುರುಪಯೋಗ ಪಡೆದ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮನೆಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು.

೨. ಸಂತ್ರಸ್ತೆ ಅಂಜನಾ ಅವರು ಲಕ್ಷ್ಮಣಪುರಿಯ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಆರೋಪಿಗಳು ಬೀಗ ಒಡೆದು ಮನೆ ಪ್ರವೇಶಿಸಿ, ಮನೆಯನ್ನು ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಲ್ಲದೆ, ಕೆಲವು ಕಡೆಗಳಲ್ಲಿ ಧ್ವಂಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು; ಆದರೆ ಪೊಲೀಸರು ಯಾವುದೇ ವಿಶೇಷ ಕ್ರಮ ಕೈಗೊಂಡಿರಲಿಲ್ಲ. (ಇಂತಹ ಪೊಲೀಸರನ್ನು ಜೀವಾವಧಿ ಶಿಕ್ಷೆ ವಿಧಿಸಬೇಕು ! – ಸಂಪಾದಕರು)

೩. ಸ್ಥಳೀಯ ಮಟ್ಟದಲ್ಲಿ ದೂರು ನೀಡಿದರೂ ಯಾವುದೇ ಪರಿಹಾರ ಸಿಗದ ಕಾರಣ, ಡಿಸೆಂಬರ್ ೩೧, ೨೦೨೫ ರಂದು ಸಂತ್ರಸ್ತೆ ಅಂಜನಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಇಡೀ ಘಟನೆಯನ್ನು ವಿವರಿಸಿದರು. ಚಂದೌಲಿಯ ಬಲವಂತ ಯಾದವ ಮತ್ತು ಮನೋಜ ಕುಮಾರ ಯಾದವ ಅವರು ತಮ್ಮ ಮನೆಯನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಮನೆಯ ಮೇಲೆ ತಮ್ಮ ಹೆಸರಿನ ನಾಮಫಲಕ ಹಾಕಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

೪. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಆದೇಶ ಸಿಗುತ್ತಿದ್ದಂತೆಯೇ ಲಕ್ಷ್ಮಣಪುರಿಯ ಗಾಜಿಪುರ ಪೊಲೀಸರು ಕಾರ್ಯಪ್ರವೃತ್ತರಾದರು ಮತ್ತು ಕೇವಲ ೨೪ ಗಂಟೆಗಳಲ್ಲಿ ಮನೆಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದವರನ್ನು ಬಂಧಿಸಿದರು. ಜನವರಿ ೧, ೨೦೨೬ ರಂದು ಅಂಜನಾ ಅವರಿಗೆ ಅವರ ಮನೆಯನ್ನು ಮರಳಿ ನೀಡಲಾಯಿತು.

೫. ಪೊಲೀಸರ ಸಮ್ಮುಖದಲ್ಲಿ ಅಂಜನಾ ಅವರು ಮನೆ ಪ್ರವೇಶಿಸಿದಾಗ, ಅವರ ಕಣ್ಣೀರು ಹರಿಯಿತು. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕೃತಜ್ಞತೆ ಸಲ್ಲಿಸಿದರು.

೬. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಒಂದು ಪೊಲೀಸ್ ಚೌಕಿಯ ಪ್ರಮುಖ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಭಾರತದ ಎಲ್ಲಾ ರಾಜ್ಯಗಳಿಗೂ ಯೋಗಿ ಆದಿತ್ಯನಾಥ ಅವರಂತಹ ಮುಖ್ಯಮಂತ್ರಿಗಳು ಲಭಿಸಿದರೆ, ದೇಶದಲ್ಲಿ ರಾಮರಾಜ್ಯ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ !