ಅಪಘಾತಕ್ಕೆ ಕಾರಣವಾಗುವ ಅಕ್ರಮ ಢಾಬಾಗಳು ತಲೆಎತ್ತಲು ಯಾರು ಹೊಣೆ? – ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಪ್ರಶ್ನೆ Supreme Court Illegal Eateries Accident

ರಸ್ತೆ ಅಪಘಾತಗಳನ್ನು ತಡೆಯಲು ನ್ಯಾಯಾಲಯವು ಮಾರ್ಗಸೂಚಿಗಳನ್ನು (ಗೈಡ್ಲೈನ್ಸ್) ಸಿದ್ಧಪಡಿಸಲಿದೆ!

ನವದೆಹಲಿ – ಎಕ್ಸ್ ಪ್ರೆಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಅನಧಿಕೃತ ಢಾಬಾಗಳು ಮತ್ತು ಸಣ್ಣ ಹೋಟೆಲ್‌ಗಳು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿವೆ. ಇಂತಹ ಢಾಬಾಗಳು ನಿರ್ಮಾಣವಾಗಲು ಯಾರು ಹೊಣೆ? ರಸ್ತೆ ಅಪಘಾತಗಳನ್ನು ತಡೆಯಲು ದೇಶಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನವೆಂಬರ್ ೨ ರಂದು ರಾಜಸ್ಥಾನದ ಫಲೋದಿಯಲ್ಲಿ ನಡೆದ ರಸ್ತೆ ಅಪಘಾತವನ್ನು ನ್ಯಾಯಾಲಯವು ಉಲ್ಲೇಖಿಸಿತು. ಈ ಅಪಘಾತದಲ್ಲಿ ೧೫ ಜನರು ಸಾವನ್ನಪ್ಪಿದ್ದರು. ಇದರ ನಂತರ ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

೧. ‘ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ನ್ಯಾಯಾಲಯವು, ಇಂತಹ ಢಾಬಾಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವ ನಿಯಮಗಳಿವೆ ಮತ್ತು ಇದುವರೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ? ಎಂದು ಪ್ರಶ್ನಿಸಿತು.

೨. ತುಷಾರ ಮೆಹ್ತಾ ಅವರು, ಅನಧಿಕೃತ ಢಾಬಾಗಳನ್ನು ತೆರವುಗೊಳಿಸಲು ನಿಯಮಗಳಿವೆ; ಆದರೆ ಈ ಜವಾಬ್ದಾರಿಯನ್ನು ಹೆಚ್ಚಾಗಿ ಜಿಲ್ಲಾಡಳಿತಕ್ಕೆ ವಹಿಸಲಾಗುತ್ತದೆ. ಸ್ಥಳೀಯ ಪೊಲೀಸರು ಮತ್ತು ಆಡಳಿತವು ಜಿಲ್ಲಾಡಳಿತದ ಅಧೀನದಲ್ಲಿರುತ್ತವೆ, ನಮ್ಮ ಅಧೀನದಲ್ಲಿಲ್ಲ. ಇದೇ ಕಾರಣದಿಂದ ಸಮಸ್ಯೆ ಮುಂದುವರಿಯುತ್ತಿದೆ ಎಂದು ತಿಳಿಸಿದರು.

ಇದು ಸಂಪೂರ್ಣ ದೇಶದ ಸಮಸ್ಯೆ!

ನ್ಯಾಯಾಲಯವು, ಪ್ರತಿಯೊಂದು ರಾಷ್ಟ್ರೀಯ ಹೆದ್ದಾರಿ ಅಥವಾ ಎಕ್ಸ್ ಪ್ರೆಸ್ ವೇಗಳ ಪಕ್ಕದಲ್ಲಿ ‘ಸರ್ವಿಸ್ ರಸ್ತೆ’ (ಸ್ಥಳೀಯ ಸಂಚಾರಕ್ಕಾಗಿ ಇರುವ ಕಿರು ಹಾದಿ) ಇರುವುದಿಲ್ಲ. ಅಂತಹ ಕಡೆಗಳಲ್ಲಿ ಅಕ್ರಮ ಢಾಬಾಗಳು ನಿರ್ಮಾಣವಾಗುತ್ತವೆ ಮತ್ತು ಅಲ್ಲಿಯೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಇಂತಹ ಢಾಬಾಗಳು ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಕಾನೂನಿನ ಪ್ರಕಾರ ಯಾರ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿಯಬೇಕಿದೆ ಎಂದು ನ್ಯಾಯಾಲಯ ಹೇಳಿತು. ಇದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ, ಬದಲಿಗೆ ಇಡೀ ದೇಶದ ಸಮಸ್ಯೆಯಾಗಿದೆ. ಆದ್ದರಿಂದ, ಮಾರ್ಗಸೂಚಿಗಳನ್ನು ನಿರ್ಮಿಸುವ ಮೂಲಕ ಕಾನೂನಿನ ಲೋಪದೋಷಗಳನ್ನು ದೂರ ಮಾಡಲಾಗುವುದು, ಇದರಿಂದ ಫಲೋದಿಯಂತಹ ಅಪಘಾತಗಳು ಮರುಕಳಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಂಪಾದಕೀಯ ನಿಲುವು

ಸರಕಾರಗಳು ಮಾಡಬೇಕಾದ ಕೆಲಸವನ್ನು ನ್ಯಾಯಾಲಯವೇ ಮಾಡಬೇಕಾಗಿ ಬಂದರೆ, ಸರಕಾರಗಳ ಉಪಯೋಗವಾದರೂ ಏನು?