ವಿಧಾನಮಂಡಲದ ಬಾಕಿ ಉಳಿದ ಭರವಸೆಗಳ ಪೂರ್ತಿಗಾಗಿ ಸರಕಾರ ವಿಭಾಗೀಯ ಸಮಿತಿಗಳನ್ನು ಸ್ಥಾಪಿಸಲಿದೆ !

ದೈನಿಕ ‘ಸನಾತನ ಪ್ರಭಾತ’ದ ವರದಿಯ ಪರಿಣಾಮ !

ಪ್ರತಿ ೧೫ ದಿನಗಳಿಗೊಮ್ಮೆ ಭರವಸೆಗಳ ಅವಲೋಕನ !

ಮುಂಬಯಿ, ೭ ನವೆಂಬರ್ (ವಾರ್ತೆ) – ವಿಧಾನಮಂಡಲದಲ್ಲಿ ಬಾಕಿ ಉಳಿದ ಭರವಸೆಗಳನ್ನು ಈಡೇರಿಸಲು ಸರಕಾರವು ಪ್ರತಿ ವಿಭಾಗವಾರು ಸಮಿತಿಗಳನ್ನು ಸ್ಥಾಪಿಸಲು ಮತ್ತು ಬಾಕಿ ಉಳಿದ ಭರವಸೆಗಳನ್ನು ಪ್ರತಿ ೧೫ ದಿನಗಳಿಗೊಮ್ಮೆ ಅವಲೋಕಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಂತ್ರಿಗಳು ವಿಧಾನಮಂಡಲದಲ್ಲಿ ನೀಡಿದ ಭರವಸೆಗಳನ್ನು ೯೦ ದಿನಗಳಲ್ಲಿ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದರೂ, ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರ ವಿಧಾನಮಂಡಲದಲ್ಲಿ ಅನೇಕ ವರ್ಷಗಳಿಂದ ಸಾವಿರಾರು ಭರವಸೆಗಳು ಬಾಕಿ ಉಳಿದಿವೆ ಎಂಬ ಪ್ರಮುಖ ವರದಿಯನ್ನು ದೈನಿಕ ‘ಸನಾತನ ಪ್ರಭಾತ’ ಪ್ರಕಟಿಸಿತ್ತು. ‘ಸನಾತನ ಪ್ರಭಾತ’ದಲ್ಲಿ ಬಾಕಿ ಉಳಿದ ಭರವಸೆಗಳ ವಿಭಾಗವಾರು ಅಂಕಿ-ಅಂಶಗಳನ್ನೂ ಪ್ರಕಟಿಸಲಾಗಿತ್ತು. ಈ ರೀತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳನ್ನು ಈಡೇರಿಸಲು ಪ್ರತಿ ವಿಭಾಗವಾರು ಸಮಿತಿಯನ್ನು ಸ್ಥಾಪಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ. ಇದನ್ನು ‘ಸನಾತನ ಪ್ರಭಾತ’ದ ಒಂದು ರೀತಿಯ ಯಶಸ್ಸು ಎಂದು ಹೇಳಬಹುದು.

ಪ್ರತಿ ವಿಭಾಗದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಗುವುದು. ಕಂದಾಯ ಮತ್ತು ಅರಣ್ಯ ಇಲಾಖೆಯು ನವೆಂಬರ್ ೬ ರಂದು ಸರಕಾರದ ನಿರ್ಣಯವನ್ನು ಹೊರಡಿಸಿ ಈ ರೀತಿಯ ಸಮಿತಿಯನ್ನು ಸ್ಥಾಪಿಸಿದೆ. ೯೦ ದಿನಗಳೊಳಗೆ ಭರವಸೆಗಳನ್ನು ಪೂರ್ಣಗೊಳಿಸದಿದ್ದರೆ, ಸೂಕ್ತ ವಿವರಣೆಯೊಂದಿಗೆ ಈ ಮಾಹಿತಿಯನ್ನು ವಿಧಾನಮಂಡಲದ ಭರವಸೆಗಳ ಸಮಿತಿಗೆ ನೀಡಲು ಈ ಸರಕಾರದ ನಿರ್ಣಯದಲ್ಲಿ ನಿರ್ದೇಶನ ನೀಡಲಾಗಿದೆ.

ದೈನಿಕ ‘ಸನಾತನ ಪ್ರಭಾತ’ದ ಅನುಸರಣೆ ಮತ್ತು ಯಶಸ್ಸು !

ಲೋಕಸಭೆಯ ಅಧ್ಯಕ್ಷರಾದ ಓಂ ಬಿರ್ಲಾ ಜೂನ್ ೨೦೨೫ ರಲ್ಲಿ ಮಹಾರಾಷ್ಟ್ರ ವಿಧಾನಮಂಡಲಕ್ಕೆ ಬಂದಾಗ, ಅವರ ಪತ್ರಿಕಾಗೋಷ್ಠಿಯಲ್ಲಿ ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ಮಹಾರಾಷ್ಟ್ರದ ಬಾಕಿ ಉಳಿದ ಭರವಸೆಗಳ ಕುರಿತು ಪ್ರಶ್ನಿಸಿದಾಗ, ಅವರು ದೇಶದ ಇತರ ರಾಜ್ಯಗಳ ವಿಧಾನಮಂಡಲಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಧಾನಮಂಡಲಗಳೊಂದಿಗೆ ಸಭೆ ನಡೆಸುವ ಭರವಸೆಯನ್ನು ಅವರು ನೀಡಿದರು. ನಂತರ ಕೆಲವು ದಿನಗಳಲ್ಲಿ ಮಹಾರಾಷ್ಟ್ರ ವಿಧಾನಮಂಡಲವು ಬಾಕಿ ಉಳಿದ ಭರವಸೆಗಳ ನಿರ್ವಹಣೆಗಾಗಿ ‘ಡ್ಯಾಶ್ ಬೋರ್ಡ್’ ಅನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಅದರ ನಂತರ, ಸರಕಾರಿ ಮಟ್ಟದಲ್ಲಿ ಪ್ರತಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.