ಪ್ರಮುಖ ಭಯೋತ್ಪಾದಕ ಕುಖ್ಯಾತ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ಆಸ್ತಿಗಳ ಹರಾಜು ನಡೆಯಲಿದೆ!

  • 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣ

  • ಕೋಟ್ಯಂತರ ರೂಪಾಯಿಗಳ ಭೂಮಿ ಮತ್ತು ಲಕ್ಷಾಂತರ ರೂಪಾಯಿಗಳ ಮನೆಗಳು!

ಮುಂಬಯಿ – 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಮುಖ ಭಯೋತ್ಪಾದಕ ಕುಖ್ಯಾತ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ಅವರ ಜಪ್ತಿ ಮಾಡಲಾದ ಆಸ್ತಿಗಳನ್ನು ಹರಾಜು ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ದಾವೂದ್ ಮತ್ತು ಮೆಮನ್ ಕುಟುಂಬದ ಆಸ್ತಿಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಅನೇಕ ಪ್ರಮುಖ ಸ್ಥಳಗಳ ಮನೆಗಳು ಮತ್ತು ಭೂಮಿ ಸೇರಿವೆ.

1. ದಾವೂದ್ ಇಬ್ರಾಹಿಂ ತಾಯಿಯ ಹೆಸರಿನಲ್ಲಿರುವ ಖೇಡ್ (ರತ್ನಗಿರಿ) ನ 4 ಆಸ್ತಿಗಳನ್ನು ಹರಾಜು ಮಾಡಲು ಪ್ರಯತ್ನಿಸಲಾಯಿತು; ಆದರೆ ಸುಮಾರು 20 ಲಕ್ಷ ರೂಪಾಯಿ ಮೌಲ್ಯವಿದ್ದರೂ ಒಬ್ಬರೂ ಖರೀದಿದಾರರು ಮುಂದೆ ಬರಲಿಲ್ಲ. ಈ ಭೂಮಿಗಳನ್ನು ಮಾರಾಟ ಮಾಡಲು ಇದು ಐದನೇ ಪ್ರಯತ್ನವಾಗಿತ್ತು. ಈ ಮೊದಲು ಒಬ್ಬ ವ್ಯಕ್ತಿ ಸಣ್ಣ ಭೂಮಿಗಾಗಿ 2 ಕೋಟಿ ರೂಪಾಯಿ ಬಿಡ್ ಮಾಡಿದ್ದನು; ಆದರೆ ನಂತರ ಒಪ್ಪಂದವನ್ನು ಪೂರ್ಣಗೊಳಿಸದ ಕಾರಣ ಆತನನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.

2. ಟೈಗರ್ ಮೆಮನ್ ಅವರ ಕುಟುಂಬವು ಮಾಹಿಮ್, ಬಾಂದ್ರಾ, ವಾಕೋಲಾ ಮತ್ತು ದಕ್ಷಿಣ ಮುಂಬಯಿಯಲ್ಲಿ ಅನೇಕ ಆಸ್ತಿಗಳನ್ನು ಹೊಂದಿದೆ. ಮಾಹಿಮ್‌ನ ಅಲ್ ಹುಸೇನಿ ಕಟ್ಟಡದ ಮನೆಯನ್ನು ಆತ 1993 ರ ಬಾಂಬ್ ಸ್ಫೋಟಗಳ ಸಂಚು ರೂಪಿಸಲು ಬಳಸಿದ್ದನು. ಇದರ ಹರಾಜು ಕೂಡ ನಡೆಯಲಿದೆ. ‘ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ ಅಥಾರಿಟಿ’ಯು 8 ಆಸ್ತಿಗಳ ಜೊತೆಗೆ ಈ ಅಪಾರ್ಟ್ಮೆಂಟ್ ಅನ್ನು ವಶಪಡಿಸಿಕೊಂಡಿದ್ದು, ಅದರ ಮೌಲ್ಯಮಾಪನ ನಡೆಯುತ್ತಿದೆ.

ಈ ಆಸ್ತಿಗಳ ಹರಾಜು ನಡೆಯಲಿದೆ!

1. ಮಾಹಿಮ್‌ನಲ್ಲಿರುವ ಅಲ್ ಹುಸೇನಿ ಕಟ್ಟಡದ ಮೂರು ‘ಅಪಾರ್ಟ್‌ಮೆಂಟ್‌ಗಳು’ (ಇಲ್ಲಿ ಸಂಚು ರೂಪಿಸಲಾಗಿತ್ತು)

2. ವಾಕೋಲಾದಲ್ಲಿನ 10 ಸಾವಿರ ಚದರ ಮೀಟರ್ ಭೂಮಿ (ಅಂದಾಜು ಮೌಲ್ಯ 400 ಕೋಟಿ) (ಸದ್ಯ ಅತಿಕ್ರಮಣಕ್ಕೊಳಗಾಗಿದೆ)

3. ದಕ್ಷಿಣ ಮುಂಬಯಿಯ ಜವೇರಿ ಬಜಾರ್, ಬಾಂದ್ರಾ ಮತ್ತು ಕುರ್ಲಾದಲ್ಲಿನ ಫ್ಲಾಟ್‌ಗಳು

4. ‘ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ ಅಥಾರಿಟಿ’ಯು ಟಾಡಾ ನ್ಯಾಯಾಲಯಕ್ಕೆ ಮೆಮನ್ ಕುಟುಂಬದ 17 ಆಸ್ತಿಗಳ ಮಾಹಿತಿಯನ್ನು ನೀಡಿದ್ದು, ಅವುಗಳಲ್ಲಿ 8 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಸದ್ಯ ಆಸ್ತಿಗಳ ಮೌಲ್ಯಮಾಪನ ನಡೆಯುತ್ತಿದ್ದು, ಹರಾಜು ಪ್ರಕ್ರಿಯೆಯು ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಪ್ರಾರಂಭವಾಗಬಹುದು. ಈ ಆಸ್ತಿಗಳನ್ನು ಹರಾಜು ಮಾಡುವ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದ ಅಕ್ರಮ ಆಸ್ತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಸರಕಾರದ ಉದ್ದೇಶವಾಗಿದೆ. ಈ ಹರಾಜಿನಿಂದ ಬರುವ ಆದಾಯವನ್ನು ‘ರಾಷ್ಟ್ರೀಯ ಭದ್ರತೆ’ ಮತ್ತು ‘ಸಾಮಾಜಿಕ ಕಲ್ಯಾಣ’ಕ್ಕಾಗಿ ಬಳಸಲಾಗುವುದು ಎಂದು ತಿಳಿದುಬಂದಿದೆ.