‘ಸನಾತನ ಧರ್ಮವು ಭಾರತವನ್ನು ಹಾಳುಮಾಡಿದೆ!’ – ಜಿತೇಂದ್ರ ಆವ್ಹಾಡ್, ಶರದ್‌ಚಂದ್ರ ಪವಾರ್ ಬಣ

‘ಕೇಸರಿ ಭಯೋತ್ಪಾದನೆ’ಯ ಷಡ್ಯಂತ್ರ ವಿಫಲವಾದ ನಂತರ ಆವ್ಹಾಡ್‌ರ ಕೂಗಾಟ !

ಮುಂಬಯಿ – ಹಿಂದೂ ಧರ್ಮ ಬೇರೆ ಮತ್ತು ಸನಾತನ ಧರ್ಮ ಬೇರೆ. ಹಿಂದೂ ಧರ್ಮ ಎಂದರೆ ಸನಾತನ ಧರ್ಮವಲ್ಲ. ಸನಾತನ ಧರ್ಮವು ಹಿಂದೂ ಧರ್ಮವನ್ನು ಹಾಳುಮಾಡಿದೆ. ನಾವು ಕೂಡ ಹಿಂದೂಗಳು. ನಮಗೂ ಹಿಂದೂ ಧರ್ಮದ ಬಗ್ಗೆ ಅಭಿಮಾನ ಇದೆ, ಹೆಮ್ಮೆ ಇದೆ. ಸನಾತನ ಧರ್ಮವೇ ಹಿಂದೂ ಧರ್ಮ ಎಂದು ಕೆಲವರು ಗೊಂದಲ ಮಾಡುತ್ತಿದ್ದಾರೆ. ಆ ಬಲೆಗೆ ಬೀಳಬೇಡಿ. ಸನಾತನ ಎಂದರೆ ‘ಬದಲಾಯಿಸಲಾಗದ ವ್ಯವಸ್ಥೆ’, ಹಳೆಯ, ಪ್ರಾಚೀನ ಎಂದರ್ಥ. ಛತ್ರಪತಿ ಶಿವಾಜಿ ಮಹಾರಾಜರು ಮೊದಲು ಸನಾತನ ಧರ್ಮವನ್ನು ವಿರೋಧಿಸಿದರು. ಅವರ ಪಟ್ಟಾಭಿಷೇಕಕ್ಕೆ ವಿರೋಧವಿತ್ತು, ಅದನ್ನು ಅವರು ವಿರೋಧಿಸಿ ಪಟ್ಟಾಭಿಷೇಕ ಮಾಡಿಸಿಕೊಂಡರು. ಸನಾತನ ವಿಕೃತಿಗೆ ಶಾಹು, ಫುಲೆ, ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅವರು ಸನಾತನ ಧರ್ಮದಿಂದ ಬಂದಿದ್ದ ಮನುಸ್ಮೃತಿಯನ್ನು ಸುಟ್ಟುಹಾಕಿದರು. ಪ್ರಗತಿಪರ ಮಹಾರಾಷ್ಟ್ರದಲ್ಲಿ ಸನಾತನಿ ವಿಕೃತಿಯ ವಿರುದ್ಧ ಜನರು ಇದ್ದಾರೆ ಎಂದು ಶರದ್‌ಚಂದ್ರ ಪವಾರ್ ಬಣದ ಶಾಸಕ ಜಿತೇಂದ್ರ ಆವ್ಹಾಡ್ ಅವರು ವಾಹಿನಿಗಳ ಜೊತೆ ಮಾತನಾಡುತ್ತಾ ಸನಾತನ ಧರ್ಮದ ಬಗ್ಗೆ ಅತ್ಯಂತ ದ್ವೇಷಪೂರ್ಣ ಮತ್ತು ಇತಿಹಾಸ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.