OIC Indus Water Treaty : ‘ಸಿಂಧು ನದಿ ನೀರು ಒಪ್ಪಂದವನ್ನು ನಿಲ್ಲಿಸಬಾರದು !’ – 57 ಇಸ್ಲಾಮಿಕ್ ರಾಷ್ಟ್ರಗಳಿಂದ ಮನವಿ

57 ಇಸ್ಲಾಮಿಕ್ ರಾಷ್ಟ್ರಗಳ ‘ಇಸ್ಲಾಮಿಕ್ ಸಹಕಾರ ಸಂಘಟನೆ’ ಸಭೆಯಲ್ಲಿ ಕರೆ

ಇಸ್ತಾಂಬುಲ (ಟರ್ಕಿ) – ಇಲ್ಲಿ ಜೂನ್ 22 ರಂದು ನಡೆದ 57 ಇಸ್ಲಾಮಿಕ್ ದೇಶಗಳ ‘ಇಸ್ಲಾಮಿಕ್ ಸಹಕಾರ ಸಂಘಟನೆ’ಯ (‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ ನ) ವಿದೇಶಾಂಗ ಮಂತ್ರಿಗಳ ಸಮ್ಮೇಳನದಲ್ಲಿ, ಸಿಂಧು ನದಿ ನೀರು ಒಪ್ಪಂದ ಹಾಗೂ ಪಾಕಿಸ್ತಾನ-ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಎರಡೂ ದೇಶಗಳು ಪಾಲಿಸುವಂತೆ ಮನವಿ ಮಾಡಲಾಯಿತು.

ಈ ಕುರಿತು ಹೊರಡಿಸಲಾದ ಮನವಿಯಲ್ಲಿ, “ದಕ್ಷಿಣ ಏಷ್ಯಾದಲ್ಲಿ ಇತ್ತೀಚೆಗೆ ನಡೆದ ಸೇನಾ ಕಾರ್ಯಾಚರಣೆಗಳ ಬಗ್ಗೆ ನಮಗೆ ಕಳವಳವಿದೆ. ಭಾರತವು ಪಾಕಿಸ್ತಾನದಲ್ಲಿ ಹಲವು ಕಡೆ ದಾಳಿಗಳನ್ನು ನಡೆಸಿದೆ. ನಾವು ಎರಡೂ ದೇಶಗಳಿಗೆ ತಾಳ್ಮೆ ಇಡುವಂತೆ ಮತ್ತು ಆಕ್ರಮಣಕಾರಿ ನಿಲುವು ತಳೆಯದಂತೆ ಮನವಿ ಮಾಡುತ್ತೇವೆ. ಅಲ್ಲದೆ, ಸಿಂಧು ನದಿ ನೀರು ಒಪ್ಪಂದವನ್ನು ನಿಲ್ಲಿಸಬಾರದು. ಮೊದಲಿನಂತೆಯೇ ಎರಡೂ ದೇಶಗಳು ಒಪ್ಪಂದವನ್ನು ಪಾಲಿಸಬೇಕು. ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಇಸ್ಲಾಮಿಕ್ ಸಹಕಾರ ಸಂಘಟನೆಯ ನಿರ್ಣಯ ಮತ್ತು ಕಾಶ್ಮೀರಿ ಜನರ ಇಚ್ಛೆಯಂತೆ ಅವರ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ” ಎಂದು ಹೇಳಲಾಗಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಈ ಸಭೆಯಲ್ಲಿ ಭಾಗವಹಿಸಿದ್ದರು. ದಾರ್ ಅವರೊಂದಿಗೆ ಪಾಕಿಸ್ತಾನಿ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಕೂಡ ಇದ್ದರು. ಮುನೀರ್ ಅವರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರನ್ನು ಭೇಟಿಯಾದರು.

ಸಂಪಾದಕೀಯ ನಿಲುವು

‘ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಾರದು’ ಎಂದು ಇಸ್ಲಾಮಿಕ್ ಸಂಘಟನೆಗಳು ಏಕೆ ಕರೆ ನೀಡುವುದಿಲ್ಲ?