ಉಚಿತ ಪಡಿತರ ಮತ್ತು ಹಣ ಸಿಗುತ್ತಿದ್ದರಿಂದ ಜನರಿಗೆ ಕೆಲಸ ಮಾಡುವುದು ಬೇಡವಾಗಿದೆ ! – ಸುಪ್ರಿಂ ಕೋರ್ಟ್

ರಾಜಕೀಯ ಪಕ್ಷಗಳ ಕಿವಿ ಹಿಂಡಿದ ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಜನರಿಗೆ ಕೆಲಸ ಮಾಡುವುದು ಬೇಡವಾಗಿದೆ; ಏಕೆಂದರೆ ಅವರಿಗೆ ಉಚಿತ ಪಡಿತರ ಮತ್ತು ಹಣ ಸಿಗುತ್ತಿದೆ. ಉಚಿತ ಪಡಿತರ ಮತ್ತು ಹಣವನ್ನು ನೀಡುವ ಬದಲು, ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಉತ್ತಮವಾಗುವುದು, ಇದರಿಂದ ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

1. ನ್ಯಾಯಮೂರ್ತಿ ಬಿ.ಆರ್. ಗವಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಅವರ ಪೀಠದ ಮುಂದೆ ನಗರ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸುವುದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆದಿತ್ತು. ವಿಚಾರಣೆಯ ಸಮಯದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟಮಣಿ ಅವರು, ಸರಕಾರ ನಗರ ಬಡತನ ನಿರ್ಮೂಲನಾ ಕಾರ್ಯಕ್ರಮವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಇದು ನಗರ ಪ್ರದೇಶದ ಬಡ ನಿರಾಶ್ರಿತ ಜನರಿಗೆ ವಸತಿ ಒದಗಿಸುವುದು ಸೇರಿದಂತೆ ಇತರ ಮಹತ್ವದ ಅಂಶಗಳ ಮೇಲೆ ಕೆಲಸ ಮಾಡಲು ಸಹಾಯವಾಗುವುದು’, ಎಂದು ಹೇಳಿದರು.

2. ಸರ್ವೋಚ್ಚ ನ್ಯಾಯಾಲಯವು ಅಟಾರ್ನಿ ಜನರಲ್ ಅವರಿಗೆ ಸರಕಾರದಿಂದ ಮಾಹಿತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂದು ತಿಳಿಸುವಂತೆ ಹೇಳಿತು. ನ್ಯಾಯಾಲಯವು 6 ವಾರಗಳ ನಂತರ ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ.

3. ಈ ಹಿಂದೆಯೂ ದೆಹಲಿ ವಿಧಾನಸಭಾ ಚುನಾವಣೆಗೂ ಮೊದಲು ಸರ್ವೋಚ್ಚ ನ್ಯಾಯಾಲಯವು, `ರಾಜ್ಯ ಸರಕಾರಗಳ ಬಳಿ ಉಚಿತ ಯೋಜನೆಗಳಿಗೆ ಹಣವಿದೆ; ಆದರೆ ನ್ಯಾಯಮೂರ್ತಿಯ ವೇತನಕ್ಕಾಗಿ ಮತ್ತು ಪಿಂಚಣಿಗೆ ಹಣವಿಲ್ಲ’ ಎಂದು ಹೇಳಿತ್ತು. ಈ ಸಂದರ್ಭದಲ್ಲಿ, ನ್ಯಾಯಾಲಯವು ಮಹಾರಾಷ್ಟ್ರ ಸರಕಾರದ ‘ಲಾಡಕಿ ಬಹೀಣ ಯೋಜನೆ’ ಮತ್ತು ದೆಹಲಿ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ನೀಡಿದ ಭರವಸೆಗಳ ಉದಾಹರಣೆಯನ್ನು ನೀಡಿತ್ತು.