ಬಿಜಾಪುರ (ಛತ್ತೀಸ್‌ಗಢ) ಇಲ್ಲಿ 31 ನಕ್ಸಲರ ಹತ್ಯೆ, ಇಬ್ಬರು ಸೈನಿಕರು ಹುತಾತ್ಮ

ಬಿಜಾಪುರ (ಛತ್ತೀಸ್‌ಗಡ) – ಇಲ್ಲಿನ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು 31 ನಕ್ಸಲರನ್ನು ಹತ್ಯೆ ಮಾಡಿದರು. ಅದೇ ಸಮಯದಲ್ಲಿ, 2 ಸೈನಿಕರು ವೀರಮರಣ ಹೊಂದಿದರು, ಮತ್ತು 2 ಇತರ ಸೈನಿಕರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದಲ್ಲಿ ಈ ವರ್ಷ ಇದು ಎರಡನೇ ಚಕಮಕಿಯಾಗಿದೆ. ಇದಕ್ಕೂ ಮೊದಲು, ಜನವರಿ 12 ರಂದು ನಡೆದ ಚಕಮಕಿಯಲ್ಲಿ 3 ನಕ್ಸಲರು ಸಾವನ್ನಪ್ಪಿದ್ದರು.

ಈ ವರ್ಷದಲ್ಲಿ ಇಲ್ಲಿಯವರೆಗೆ 62 ನಕ್ಸಲರನ್ನು ಚಕಮಕಿಯಲ್ಲಿ ಹತ್ಯೆ ಮಾಡಲಾಗಿದೆ ಹಾಗೂ ಛತ್ತೀಸ್‌ಗಢದಲ್ಲಿ ನಕ್ಸಲರ ವಿರುದ್ಧ ಹೋರಾಡುವಾಗ 11 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಹಾಗೆಯೇ ಈ ವರ್ಷದಲ್ಲಿ ಬಿಜಾಪುರದ 5 ಜನರು ಸೇರಿದಂತೆ ಕನಿಷ್ಠ 9 ಜನ ನಕ್ಸಲರ ಹತ್ಯೆ ಮಾಡಲಾಗಿದೆ. ಛತ್ತೀಸ್‌ಗಢ ರಾಜ್ಯದ ‘ಅಬುಝಮಾಡ’ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನವು ನಕ್ಸಲರ ಒಂದು ಸುರಕ್ಷಿತ ಆಶ್ರಯತಾಣವಾಗಿದೆ ಎಂದು ನಂಬಲಾಗಿದೆ. 2 ಸಾವಿರದ 799 ಚದರ ಕಿಲೋಮೀಟರ್‍‌ಗಳಷ್ಟು ವಿಸ್ತೀರ್ಣದಲ್ಲಿರುವ ಈ ಉದ್ಯಾನವನವು ಮಹಾರಾಷ್ಟ್ರದ ಗಡಿಯಲ್ಲಿದೆ. ಇದನ್ನು 1983 ರಲ್ಲಿ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ.