ಪ್ರಯಾಗರಾಜ್, ಜನವರಿ 12 (ಸುದ್ದಿ) – ಮಹಾಕುಂಭದಲ್ಲಿ ಜನವರಿ 13 ರಂದು ಮೊದಲ ಪರ್ವ ಸ್ನಾನ ನಡೆಯಲಿದೆ. ಆದ್ದರಿಂದ, ಜನವರಿ 11 ಮತ್ತು 12 ರ 2 ದಿನಗಳಲ್ಲಿ ಮಹಾಕುಂಭ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಲ್ಪವಾಸಿಗಳು ಬಂದಿದ್ದಾರೆ; ಆದರೆ, ಕೆಲವು ಕಲ್ಪವಾಸಿಯ ಆಶ್ರಮಗಳಲ್ಲಿ ಇನ್ನೂ ವಿದ್ಯುತ್ ಮತ್ತು ನೀರಿನ ಸೌಲಭ್ಯಗಳಿಲ್ಲ. ಇದರಿಂದಾಗಿ, ಕಲ್ಪವಾಸಿಗಳು ಅನಾನುಕೂಲತೆಯನ್ನು ಅನುಭವಿಸುತ್ತಿದ್ದಾರೆ.
ಕುಂಭಕ್ಷೇತ್ರದ ಸೆಕ್ಟರ್ 19 ರಲ್ಲಿರುವ ಕಲ್ಪವಾಸಿಗಳ ಕೆಲವು ಆಶ್ರಮಗಳಿಗೆ ಭೇಟಿ ನೀಡಿದ ‘ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಯೊಬ್ಬರು ವಿಚಾರಿಸಿದಾಗ, ಅಲ್ಲಿ ಅಗತ್ಯ ಸೌಲಭ್ಯಗಳನ್ನು ಸಹ ಒದಗಿಸದೇ ಇರುವುದು ಕಂಡುಬಂದಿದೆ. ಕೆಲವು ಕಲ್ಪವಾಸಿಗಳಿಗೆ ಅವರ ಆಶ್ರಮಕ್ಕೆ ಇನ್ನೂ ಭೂಮಿಯೂ ದೊರಕಿಲ್ಲ. ಕೆಲವರು ಭೂಮಿ ಪಡೆದಿದ್ದಾರೆ; ಆದರೆ ಅವುಗಳ ಮೇಲೆ ಯಾವುದೇ ಡೇರೆಗಳನ್ನು ನಿರ್ಮಿಸಲಾಗಿಲ್ಲ. ಕೆಲವು ಸ್ಥಳಗಳಲ್ಲಿ ಡೇರೆಗಳಿವೆ; ಆದರೆ, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ, ಕಲ್ಪ ನಿವಾಸಿಗಳು ಹತ್ತಿರದ ಟ್ಯಾಂಕರ್‍ಗಳಿಂದ ನೀರು ತರಬೇಕಾಗಿದೆ. ಜನವರಿ 13 ರಿಂದ ಕಲ್ಪವಾಸಿಗಳ ಸಾಧನೆಯು ಪ್ರಾರಂಭವಾಗಲಿದೆ. ಆದ್ದರಿಂದ, ವಸತಿ, ವಿದ್ಯುತ್, ನೀರು ಇತ್ಯಾದಿಗಳನ್ನು ವ್ಯವಸ್ಥೆ ಮಾಡುವತ್ತ ಗಮನ ಹರಿಸುವ ಮೂಲಕ ಅವರ ಕಲ್ಪವಾಸದ ದಿನಚರಿಯನ್ನು ಯೋಜಿಸಬೇಕಾಗುತ್ತಿದೆ. ಕೆಲವು ಕಲ್ಪ ನಿವಾಸಿಗಳು ಈ ಕುರಿತು ಆಡಳಿತದ ಸಡಿಲ/ನಿರ್ಲಕ್ಷ್ಯದ ನಿರ್ವಹಣೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.