ಕಾಶಿ ವಿದ್ವತ್ ವಿಧಿ ವಿಧಾನ ಪರಿಷತ್ತು ಘೋಷಿಸಿದ ಪ್ರಾಯಶ್ಚಿತ್ತ
ವಾರಣಾಸಿ (ಉತ್ತರ ಪ್ರದೇಶ) – ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡುವಿನ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಂಡು ಬಂದಿರುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಪ್ರಸಾದವನ್ನು ಯಾವ ಭಕ್ತರು ಸೇವಿಸಿದ್ದಾರೆಯೋ, ಅವರಿಗೆ ಚಿಂತೆ ಶುರುವಾಗಿದೆ. ಹಾಗಾಗಿ ಕಾಶಿ ವಿದ್ವತ್ ವಿಧಿ ವಿಧಾನ ಪರಿಷತ್ತು ಭಕ್ತರಿಗೆ ಅಭಕ್ಷ್ಯ (ಸೇವಿಸಲು ಸೂಕ್ತವಲ್ಲದ ಪದಾರ್ಥಗಳು) ಪ್ರಸಾದವನ್ನು ಸೇವಿಸಿರುವುದರಿಂದ ಪ್ರಾಯಶ್ಚಿತ್ತ ಪಡೆಯುವಂತೆ ಸೂಚಿಸಿದೆ. ಕಾಶಿ ವಿದ್ವತ್ ವಿಧಿ ವಿಧಾನ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಆಚಾರ್ಯ ಅಶೋಕ್ ದ್ವಿವೇದಿ ಈ ಬಗ್ಗೆ ಮಾತನಾಡಿ, ಯಾರ ಮನಸ್ಸಿನಲ್ಲಿ ಅಪರಾಧಿ ಭಾವವಿದೆಯೋ, ಅವರು ಅಭಕ್ಷ್ಯ ಪ್ರಸಾದವನ್ನು ಸೇವಿಸಿರುವ ಪಾಪದ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಕಾಶಿ ವಿದ್ವತ್ ವಿಧಿ ವಿಧಾನ ಪರಿಷತ್ತು ಭಕ್ತರಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಹಾಯ ಮಾಡುವುದು. ಪ್ರಾಯಶ್ಚಿತ್ತದ ಮೂಲ ದೇವರು ನಾರಾಯಣನಾಗಿದ್ದಾನೆ. ತಿರುಪತಿ ದೇವರು ನಾರಾಯಣನಾಗಿದ್ದಾನೆ. ಭಗವಾನ ವಿಷ್ಣು ಅಥವಾ ಶಾಲಿಗ್ರಾಮದ ಸ್ಥಾಪನೆ ಮಾಡುವುದರಿಂದ ಎಲ್ಲರ ಪ್ರಾಯಶ್ಚಿತ್ತ ವಿಧಿಗಳು ಪೂರ್ಣಗೊಳ್ಳುತ್ತವೆ. ಯಾರು ಪ್ರಸಾದ ಸ್ವೀಕರಿಸಿದ್ದಾರೆಯೋ,ಅವರು ಪಂಚಗವ್ಯವನ್ನು ಸೇವಿಸಬೇಕು. ಅದಕ್ಕಾಗಿ ಗಾಯತ್ರಿಮಂತ್ರದಿಂದ ಗೋಮೂತ್ರ, ಗಂಧಕಾಸಹ ಇತಿಮಂತ್ರದಿಂದ ಗೋಮಯ, ಅಪ್ಯಯಶ್ವಸಮೇತಿ ಮಂತ್ರದೊಂದಿಗೆ ಹಸುವಿನ ಹಾಲು, ದಧಿಕಾಗ್ರೆ ಮಂತ್ರದೊಂದಿಗೆ ಹಸುವಿನ ಮೊಸರು, ಇಜೋಸಿ ಮಂತ್ರದೊಂದಿಗೆ ಹಸುವಿನ ತುಪ್ಪ, ದೇವಸ್ಯತ್ವ ಮಂತ್ರದೊಂದಿಗೆ, ಗಂಗಾಜಲ ಅಥವಾ ಯಾವುದೇ ನದಿಯ ಜಲವನ್ನು ತೆಗೆದುಕೊಂಡು ಅದನ್ನು ಅಭಿಮಂತ್ರಿತಗೊಳಿಸಬೇಕು. ತದನಂತರ ‘ಯತ್ವಾಗಸ್ತಿಗತಂ ಪಾಪ…’ ಈ ಶ್ಲೋಕದ ಬಳಿಕ 12 ಬಾರಿ ಓಂ ಹೇಳುತ್ತಾ ಪಂಚಗವ್ಯ ಸೇವಿಸಬೇಕು. ವಿದ್ವತ್ ಪರಿಷತ್ ಆದಷ್ಟು ಬೇಗನೆ ಪ್ರಾಯಶ್ಚಿತ ಹವನಕ್ಕಾಗಿ ಪತ್ರವನ್ನು ಪ್ರಸಾರ ಮಾಡಲಿದೆ ಎಂದರು.
ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಶೀಘ್ರದಲ್ಲೇ ಶಾಸ್ತ್ರಾನುಸಾರ ಪ್ರಾಯಶ್ಚಿತ ಘೋಷಿಸಲಿದ್ದಾರೆ.
ಜ್ಯೋತಿಷ್ಯಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಕುರಿತು ಮಾತನಾಡಿ, ಅನೇಕ ಹಿಂದೂಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ನಾವು ತಿರುಪತಿಯ ಲಡ್ಡುವನ್ನು ಸೇವಿಸಿರುವುದರಿಂದ ನಾವು ಭ್ರಷ್ಟರಾಗಿದ್ದೇವೆಯೇ? ಎಂದು ಕೇಳುತ್ತಾ, ಭ್ರಷ್ಟರಾಗಿದ್ದರೆ ಅದಕ್ಕೆ ಪ್ರಾಯಶ್ಚಿತವೇನು?’ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಭಾವನೆಗಳ ಶುದ್ಧಿಕರಣಕ್ಕಾಗಿ ನಾವು ಧರ್ಮಶಾಸ್ತ್ರಜ್ಞರೊಂದಿಗೆ ವಿಚಾರವಿನಿಮಯವನ್ನು ಮಾಡಿ ಶಾಸ್ತ್ರಾನುಸಾರ ಪ್ರಾಯಶ್ವಿತ್ತವನ್ನು ಘೋಷಿಸಲಿದ್ದೇವೆ ಎಂದು ತಿಳಿಸಿದರು.