ಕೇರಳ ಕಾಂಗ್ರೆಸ್ ನಲ್ಲೂ ‘ಕಾಸ್ಟಿಂಗ್ ಕೌಚ್” ; ಆರೋಪ ಮಾಡಿದ ಮಹಿಳೆ ಪಕ್ಷದಿಂದಲೇ ಉಚ್ಚಾಟನೆ

ಸಿಮಿ ರೋಸ್ಬೆಲ್ ಜಾನ್

ಕೇರಳ ಚಿತ್ರೋದ್ಯಮದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಅವಕಾಶ ನೀಡಲು ಯುವತಿಯರನ್ನು ಬಳಸಿಕೊಂಡ ಅತಿ ದೊಡ್ಡ ಲೈಂಗಿಕ ಹಗರಣದಂತೆ ಕೇರಳ ಕಾಂಗ್ರೆಸ್ ನಲ್ಲೂ ‘ಕಾಸ್ಟಿಂಗ್ ಕೌಚ್’ ಇದೆ ಎಂಬ ಗಂಭೀರ ಆರೋಪ ಮಾಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಸಿಮಿ ರೊಸ್ಬೆಲ್ ಜಾನ್ ಅವರನ್ನು ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಲಾಗಿದೆ.

ಈ ಕುರಿತಂತೆ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ ವತಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಿಜು, ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧಾಕರನ್ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ ವತಿಯಿಂದ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಸಿಮಿ ರೊಸ್ಬೆಲ್ ಜಾನ್, ಯಾವುದೇ ಆಧಾರವಿಲ್ಲದೆ ಇಂತಹ ಆರೋಪ ಮಾಡುವ ಮೂಲಕ ಪಕ್ಷದ ಮಹಿಳಾ ಕಾರ್ಯಕರ್ತೆಯರಿಗೆ ಅಪಮಾನವೆಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಮಿ ರೋಸ್ಬೆಲ್ ಜಾನ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಸಿಮಿ ರೋಸ್ಬೆಲ್ ಜಾನ್ ಅವರ ಕಾಸ್ಟಿಂಗ್ ಕೌಚ್ ಹೇಳಿಕೆ ಕುರಿತಂತೆ ಪಕ್ಷದ ಶಿಸ್ತು ಸಮಿತಿ ಗಂಭೀರವಾಗಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಸಿಮಿಯವರು ಶಿಸ್ತನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಅಲ್ಲದೆ ನಿರಾಧಾರ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಸಿಮಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆಗೊಳಿಸಲಾಗಿದೆ ಎಂದು ಹೇಳಿದೆ.

ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಮಿ ರೋಸ್ಬೆಲ್ ಜಾನ್, ಕೇರಳ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಜೊತೆ ಆತ್ಮೀಯರಾಗಿರುವ ಮಹಿಳಾ ನಾಯಕಿಯರಿಗೆ ಉನ್ನತ ಸ್ಥಾನಮಾನ ನೀಡಲಾಗುತ್ತಿದೆ. ಪಕ್ಷದಲ್ಲಿ ಹಲವು ವರ್ಷಗಳಿಂದ ದುಡಿದಿರುವ ಮಹಿಳೆಯರನ್ನು ಕಡೆಗಣಿಸಿ ಇತ್ತೀಚೆಗಷ್ಟೇ ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಚಿತ್ರೋದ್ಯಮದಂತೆ ಕೇರಳ ಕಾಂಗ್ರೆಸ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದೀಗ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.