|
ತಿರುವನಂತಪುರಂ (ಕೇರಳ) – ಚಲನಚಿತ್ರದಂತೆಯೇ ‘ಕಾಸ್ಟಿಂಗ್ ಕೌಚ್’ನ (ಸಿನಿಮಾ ಕೆಲಸ ಪಡೆಯಲು ಶೋಷಣೆ) ಪರಿಸ್ಥಿತಿ ಕೇರಳ ಕಾಂಗ್ರೆಸ್‌ನಲ್ಲಿ ನಿರ್ಮಾಣವಾಗಿದೆ. ಹಿರಿಯ ನಾಯಕರ ಆಪ್ತರಿಗೆ ಮಾತ್ರ ಪಕ್ಷದಲ್ಲಿ ಮುಂದಕ್ಕೆ ಹೋಗುವ ಅವಕಾಶ ಸಿಗುತ್ತದೆ ಎಂದು ಕೇರಳದ ಕಾಂಗ್ರೆಸ್ ನಾಯಕಿ ಸಿಮಿ ರೋಸಬೆಲ್ ಜಾನ್ ಇವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ. ಸಿಮಿ ಅವರ ಈ ಆರೋಪದ ನಂತರ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ಕಾರ್ಯದರ್ಶಿ ಎಂ. ಲಿಜು ಅವರು ಒಂದು ಸುತ್ತೋಲೆಯನ್ನು ಹೊರಡಿಸಿ ಸಿಮಿ ರೋಸ್‌ಬೆಲ್ ಜಾನ್ ಇವರನ್ನು ಪಕ್ಷದಿಂದ ವಜಾಗೊಳಿಸಿರುವುದಾಗಿ ಘೋಷಿಸಿದರು.
ಸಿಮಿ ರೋಸಬೆಲ್ ಜಾನ್ ಇವರು ಕಾಂಗ್ರೆಸ್ ಮೇಲೆ ಮಾಡಿರುವ ಆರೋಪ
1. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ, ಅಂದರೆ ಕೆಲಸದ ಸ್ಥಳಗಳಲ್ಲಿ ಮತ್ತು ರಾಜಕೀಯದಲ್ಲಿಯೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಪಕ್ಷದ ಅನೇಕ ಸಹೋದ್ಯೋಗಿ ಮಹಿಳೆಯರು ತಮಗಾದ ಕೆಟ್ಟ ಅನುಭವಗಳನ್ನು ನನಗೆ ಹೇಳಿದ್ದಾರೆ.
2. ನಾನು ಕೇರಳದ ಕಾಂಗ್ರೆಸ್ ಮಹಿಳಾ ನಾಯಕರಿಗೆ, ನಾಯಕರನ್ನು ಭೇಟಿಯಾಗಲು ಒಬ್ಬರೇ ಹೋಗಬೇಡಿರಿ, ನಿಮ್ಮ ಕುಟುಂಬದವರನ್ನು ಅಥವಾ ಸ್ನೇಹಿತರನ್ನು ಕರೆದುಕೊಂಡು ಹೋಗಿರಿ ಎಂದು ಸಲಹೆ ನೀಡುತ್ತೇನೆ. ನನ್ನ ಬಳಿ ಪುರಾವೆಗಳಿವೆ. ಅದು ಸರಿಯಾದ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ.
3. ಕೇರಳ ಕಾಂಗ್ರೆಸ್‌ನಲ್ಲಿ ಅವಕಾಶ ಸಿಗಲು ಮಹಿಳಾ ಮುಖಂಡರು ಮತ್ತು ಕಾರ್ಯಕರ್ತೆಯರು ಶೋಷಣೆಯನ್ನು ಎದುರಿಸಲು ಸಿದ್ಧರಾಗಬೇಕು.
ನನಗೆ ಏನು ಬೇಕಾದರೂ ಆಗಬಹುದು ! – ಸಿಮಿ ರೋಸಬೆಲ ಜಾನ್
ಕಾಂಗ್ರೆಸ್ಸಿನ ಆರೋಪದ ಕುರಿತು ಸಿಮಿ ಇವರು ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅವರು ಮಾತನಾಡಿ, ಮಹಿಳಾ ಕಾಂಗ್ರೆಸ್ ಪ್ರದೇಶಾಧ್ಯಕ್ಷೆ ಲತಿಕಾ ಸುಭಾಷ್, ಕೆ. ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ್ ಇವರನ್ನೂ ಹೊರಗೆ ಹಾಕಿದರು. ಸ್ವಾಭಿಮಾನವಿರುವ ಮಹಿಳೆಯರು ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನನ್ನೂ ತೆಗೆದು ಹಾಕಿದರು. ಮಹಿಳೆಯರ ಧ್ವನಿಯಾಗಿ ನಾನು ತಪ್ಪು ಮಾಡಿದೆನು. ನನಗೆ ಈಗ ಹೊರಗೆ ತಿರುಗಾಡಲೂ ಭಯವಾಗುತ್ತಿದೆ ಎಂದು ಹೇಳಿದರು.
ಸಿಮಿಯವರ ಆರೋಪ ಆಧಾರರಹಿತ ! – ಕಾಂಗ್ರೆಸ್
ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ. ಸುಧಾಕರನ್ ಮಾತನಾಡಿ, ಮಹಿಳಾ ಕಾಂಗ್ರೆಸ್ ಸಿಮಿ ರೋಸಬೆಲ್ ಜಾನ್ ಇವರ ಆರೋಪದ ವಿರುದ್ಧ ದೂರು ದಾಖಲಿಸಿದೆ. ಸಿಮಿ ಅವರ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಗಾಂಧಿವಾದಿ ಮತ್ತು ಅಹಿಂಸಾತ್ಮಕ ಕಾಂಗ್ರೆಸ್‌ನಲ್ಲಿನ ಸರ್ವಾಧಿಕಾರ ! ಪ್ರಜಾಪ್ರಭುತ್ವದ ರಕ್ಷಣೆಯ ಹರಟೆ ಹೊಡೆಯುವ ಕಾಂಗ್ರೆಸ್ಸಿನ ವಸ್ತುಸ್ಥಿತಿಯನ್ನು ಮಂಡಿಸುವ ಮಹಿಳೆಯೊಂದಿಗೆ ಮಹಿಳಾ ಸಂಘಟನೆ ನಿಲ್ಲುವುದೇ ? |