|
ತಿರುವನಂತಪುರಂ (ಕೇರಳ) – ಕೇರಳದ ಮಲಯಾಳಂ ಚಿತ್ರರಂಗದಲ್ಲಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಸಿನಿಮಾ ನಿರ್ದೇಶಕ, ನಿರ್ಮಾಪಕ, ಪ್ರಮುಖ ನಟರು ಸೇರಿ 15 ಜನರ ಗ್ಯಾಂಗ್ ಇದರಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ. ‘ಯಾವ ಚಿತ್ರದಲ್ಲಿ ಯಾವ ನಟಿಗೆ ಅವಕಾಶ ನೀಡಬೇಕು ಎಂಬುದನ್ನು ಈ ಗ್ಯಾಂಗ್ ನಿರ್ಧರಿಸುತ್ತದೆ’ ಎಂದು ಕೇರಳ ಸರಕಾರವು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಶೋಷಣೆಯನ್ನು ಅಧ್ಯಯನ ಮಾಡಲು ರಚಿಸಿದ್ದ ನ್ಯಾಯಾಧೀಶೆ ಹೇಮಾ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ವರದಿಯಲ್ಲಿ ಇರುವುದೇನು ?
1. ‘ದೈಹಿಕ ಸಂಬಂಧ ಇಡಲು ಸಿದ್ಧರಿರುವ ಯುವತಿಯರಿಗೆ ಮಾತ್ರ ಸಿನಿಮಾಗಳಲ್ಲಿ ಕೆಲಸ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಉಳಿಯಲು ಎಲ್ಲಾ ರೀತಿಯ ಯೋಜನೆಗಳಿಗೆ ಮತ್ತು ಹೊಂದಾಣಿಕೆಗಳಿಗೆ ಒಪ್ಪಿಕೊಳ್ಳಬೇಕು ಎಂದು ನಟಿಯೊಬ್ಬರು ಹೇಳಿದ್ದಾರೆ.
2. 233 ಪುಟಗಳ ಈ ವರದಿಯನ್ನು ಮಾಹಿತಿ ಹಕ್ಕು ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ವರದಿಯು ಕೇರಳದಲ್ಲಿ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ (ಸಿನಿಮಾ ಅವಕಾಶಗಳಿಗಾಗಿ ನಟಿಯರ ಲೈಂಗಿಕ ಶೋಷಣೆ) ಇದೆ. ಇದಕ್ಕೆ ಸಹಕರಿಸಿದವರನ್ನು ಒಂದು ಗುಂಪಿನಲ್ಲಿ ಸೇರಿಸಲಾಗುತ್ತದೆ.
3. ನಟಿಯರ ಕೊಠಡಿಗಳ ಬಾಗಿಲು ರಾತ್ರಿ ವೇಳೆ ಆಗಾಗ ಬಡಿಯಲಾಗುತ್ತದೆ. ಅವರು ಬಾಗಿಲು ತೆರೆಯದಿದ್ದರೆ, ಇನ್ನೂ ಜೋರಾಗಿ ಬಡಿಯುತ್ತಾರೆ. ಕೆಲವೊಮ್ಮೆ ಬಾಗಿಲು ಮುರಿದು ಬೀಳುವಷ್ಟು ಜೋರಾಗಿ ಬಡಿಯುತ್ತಾರೆ, ಎಂದು ನಟಿಯರು ತಿಳಿಸಿದರು.
4. ಮಲಯಾಳಂ ಚಿತ್ರರಂಗವು ಅಪರಾಧಿಗಳು ಮತ್ತು ಸ್ತ್ರೀದ್ವೇಷವಾದಿಗಳಿಂದ ತುಂಬಿದೆ. ಈ 15 ಜನರ ಗ್ಯಾಂಗ್ ವಿರುದ್ಧ ದನಿ ಎತ್ತುವವರ ಭವಿಷ್ಯವನ್ನೇ ಹಾಳು ಮಾಡುವ ‘ಸಾಮರ್ಥ್ಯ’ ಅವರಿಗಿದೆ.
ಗಂಭೀರ ಪರಿಣಾಮ ಆಗಬಹುದೆಂದು ಸಂತ್ರಸ್ತ ನಟಿಯರು ಪೊಲೀಸರಿಗೆ ದೂರು ನೀಡುವುದಿಲ್ಲ !
ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿಯರು ಪೊಲೀಸರಿಗೆ ದೂರು ನೀಡಲು ನಿರಾಕರಿಸುತ್ತಾರೆ. ಯಾರಾದರೂ ದೂರು ನೀಡಿದರೆ, ಅದರ ಗಂಭೀರ ಪರಿಣಾಮವಾಗಬಹುದು. ದೂರುದಾರರ ಬಾಯಿ ಮುಚ್ಚಿಸಲಾಗುತ್ತದೆ. ಅವರ ಕುಟುಂಬದವರನ್ನೂ ಗುರಿಯಾಗಿಸಲಾಗಿದೆ. (ಇದು ಕೇರಳದ ಕಮ್ಯುನಿಸ್ಟ್ ಸರಕಾರದ ಕಾನೂನು ಸುವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ ! ಕೇಂದ್ರ ಸರಕಾರವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಂಬಂಧಿಸಿದ ನಟಿಯರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು ! – ಸಂಪಾದಕರು)
ನಾಲ್ಕೂವರೆ ವರ್ಷಗಳಿಂದ ತನಿಖಾ ವರದಿ ದಮನ !2017ರಲ್ಲಿ ನಟ ದಿಲೀಪ್ ತಂಡದಿಂದ ಚಿತ್ರನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆಗ ಆ ಪ್ರಕರಣ ದೊಡ್ಡ ಕೋಲಾಹಲ ಸೃಷ್ಟಿಸಿತ್ತು. ಆ ಬಳಿಕ ಕೇರಳ ಸರಕಾರವು ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಶೋಷಣೆಯ ಕುರಿತು ತನಿಖೆ ಮತ್ತು ವರದಿ ಮಾಡಲು ಹೇಮಾ ಸಮಿತಿಯನ್ನು ರಚಿಸಿತ್ತು. ವಿಚಿತ್ರವೆಂದರೆ ಸಮಿತಿ ವರದಿ ಸಲ್ಲಿಸಿದ ನಾಲ್ಕೂವರೆ ವರ್ಷಗಳ ಬಳಿಕ ಈಗ ಆ ವರದಿಯನ್ನು ಸಾರ್ವಜನಿಕಗೊಳಿಸಲಾಗಿದೆ. (ಈ ವರದಿಯನ್ನು ಇಷ್ಟು ವರ್ಷಗಳ ಕಾಲ ಏಕೆ ತಡೆಯಲಾಯಿತು? ಕೇರಳದ ಕಮ್ಯುನಿಸ್ಟ್ ಸರಕಾರ ಉತ್ತರ ನೀಡಬೇಕೆಂದು ಜನರೇ ಒತ್ತಡ ಹೇರಬೇಕು ! ಇಷ್ಟೊಂದು ನಡೆದರೂ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಇಂತಹ ತನಿಖಾ ಆಯೋಗದಿಂದ ಏನು ಪ್ರಯೋಜನ? ತನಿಖೆಗಾಗಿ ಖರ್ಚು ಮಾಡಿದ ಹಣ ಕೂಡ ವ್ಯರ್ಥವಾಗುವುದು – ಸಂಪಾದಕರು). |
ಸಂಪಾದಕೀಯ ನಿಲುವು
|