ಕೇಂದ್ರ ಸರಕಾರ ದೆಹಲಿಯಲ್ಲಿನ ೧ ಸಾವಿರ ೧೦೦ ರೋಹಿಂಗ್ಯಾ ನಿರಾಶ್ರಿತರನ್ನು ೨೫೦ ವಸತಿಗಳಿಗೆ ಸ್ಥಳಾಂತರಿಸಲಿದೆ

  • ೩ ಹೊತ್ತಿನ ಊಟ, ದೂರವಾಣಿ, ದೂರದರ್ಶನ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಿದೆ

  • ೨೪ ಗಂಟೆಗಳ ಕಾಲ ದೆಹಲಿ ಪೊಲೀಸರಿಂದ ರಕ್ಷಣೆ

ನವದೆಹಲಿ – ಯಾರು ದೇಶದಲ್ಲಿ ಆಶ್ರಯವನ್ನು ಕೋರಿದ್ದಾರೆಯೋ, ಅಂತಹ ಜನರನ್ನು ಭಾರತವು ಯಾವಾಗಲೂ ಸ್ವಾಗತಿಸಿದೆ. ಇದೇ ಭೂಮಿಯ ಮೇಲೆ ಒಂದು ಐತಿಹಾಸಿಕ ನಿರ್ಣಯದ ಮೂಲಕ ದೆಹಲಿಯ ೧ ಸಾವಿರ ೧೦೦ ರೋಹಿಂಗ್ಯಾ ಮುಸಲ್ಮಾನರನ್ನು ತಂಬುಗಳಿಂದ ದೆಹಲಿಯ ಬಕ್ಕರವಾಲಾ ಪ್ರದೇಶದಲ್ಲಿರುವ ಆರ್ಥಿಕ ದೃಷ್ಟಿಯಿಂದ ಹಿಂದುಳಿದವರಿಗಾಗಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳ ೨೫೦ ವಸತಿಗಳಿಗೆ ಸ್ಥಳಾಂತರಗೊಳಿಸಲಿದೆ. ಅವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಮತ್ತು ೨೪ ಗಂಟೆ ಪೊಲೀಸ ರಕ್ಷಣೆ ನೀಡಲಿದೆ. ಎಂದು ಕೇಂದ್ರ ಸಚಿವ ಹರದೀಪಸಿಂಗ ಪುರಿಯವರು ಟ್ವೀಟ ಮಾಡಿ ಮಾಹಿತಿ ನೀಡಿದ್ದಾರೆ. ಇದನ್ನು ದೆಹಲಿಯ ಮುಖ್ಯ ಸಚಿವರು, ದೆಹಲಿ ಸರಕಾರದ ಅಧಿಕಾರಿ, ದೆಹಲಿ ಪೊಲೀಸರು ಮತ್ತು ಕೇಂದ್ರೀಯ ಗೃಹ ಸಚಿವಾಲಯ ಇವರೊಂದಿಗೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈನಲ್ಲಿ ಈ ಸಭೆ ನಡೆದಿತ್ತು. ದೆಹಲಿಯ ಮದನಪುರಾ ಖಾದರ ಈ ಪ್ರದೇಶದ ತಂಬೂವಿನಲ್ಲಿ ವಾಸಿಸುತ್ತಿರುವ ಈ ರೋಹಿಂಗ್ಯಾಗಳಿಗೆ ಸರಕಾರ ಪ್ರತಿತಿಂಗಳು ೭ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ರೋಹಿಂಗ್ಯಾಗಳಿಗೆ ಬಹುಮಹಡಿ ಕಟ್ಟಡಗಳ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫ್ಯಾನ, ೩ ಹೊತ್ತಿನ ಊಟ, ಲ್ಯಾಂಡಲೈನ ದೂರವಾಣಿ, ದೂರದರ್ಶನ ಇತ್ಯಾದಿ ವಿಷಯಗಳನ್ನು ನೀಡಲಾಗುವುದು. ಯಾವ ರೋಹಿಂಗ್ಯಾಗಳ ಬಳಿ ‘ಯುನೈಟೆಡ್ ನೇಶನ ಹೈಕಮೀಶನರ ರೆಫ್ಯೂಜಿಸ್’ ಈ ಗುರುತು ಪತ್ರವಿದೆಯೋ, ಅವರಿಗೆ ಈ ಬಹುಮಹಡಿ ಕಟ್ಟಡದಲ್ಲಿ ಸ್ಥಳಾಂತರಿಸಲಾಗುವುದು. ಭಾರತವು ವಿಶ್ವಸಂಸ್ಥೆಯ ೧೯೫೧ ರ ನಿರಾಶ್ರಿತ ನಿಯಮವನ್ನು ಒಪ್ಪುತ್ತದೆ ಮತ್ತು ಧರ್ಮ, ಜಾತಿ ಮತ್ತು ವರ್ಣಗಳ ಭೇದವನ್ನು ಮಾಡದೇ ಆವಶ್ಯಕತೆಯಿರುವವರಿಗೆ ಶರಣು ನೀಡುತ್ತದೆ. ಈ ಆಧಾರದ ಮೇಲೆಯೇ ಈ ರೋಹಿಂಗ್ಯಾಗಳಿಗೆ ಮೇಲಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಈ ರೀತಿ ಯಾವುದೇ ಆದೇಶವಿಲ್ಲ ! – ಕೇಂದ್ರೀಯ ಗೃಹಸಚಿವಾಲಯದ ಸ್ಪಷ್ಟೀಕರಣ

ಪ್ರಸಾರ ಮಾಧ್ಯಮಗಳಿಂದ ರೋಹಿಂಗ್ಯಾಗಳ ಸಂದರ್ಭದಲ್ಲಿ ಪ್ರಸಾರವಾಗಿರುವ ಸುದ್ದಿಯ ಬಗ್ಗೆ, ಕೇಂದ್ರ ಗೃಹ ಸಚಿವಾಲಯವು ದೆಹಲಿಯ ಬಕರವಾಲಾದಲ್ಲಿ ರೋಹಿಂಗ್ಯಾದ ನಿರಾಶ್ರಿತರಿಗೆ ಬಹುಮಹಡಿ ಕಟ್ಟಡಗಳನ್ನು ನೀಡುವ ಯಾವುದೇ ಆದೇಶವನ್ನು ನೀಡಿಲ್ಲ. ನುಸುಳಿ ಬಂದಿರುವವರಿಗೆ ಕಾನೂನಿನಂತೆ ದೇಶದಿಂದ ಹೊರಗೆ ಕಳುಹಿಸುವವರೆಗೆ ನಿರಾಶ್ರಿತರಿಗಾಗಿ ನಿರ್ಮಿಸಿರುವ ಕೇಂದ್ರಗಳಲ್ಲಿ ಅವರನ್ನು ಇಡಲಾಗುತ್ತದೆ. ದೆಹಲಿ ಸರಕಾರವು ರಾಜ್ಯದಲ್ಲಿ ಅಂತಹ ಯಾವುದೇ ಕೇಂದ್ರಗಳ ಘೋಷಣೆ ಮಾಡಿಲ್ಲ. ಅವರಿಗೆ ಆ ರೀತಿ ಮಾಡುವಂತೆ ಆದೇಶವನ್ನು ನೀಡಲಾಗಿದೆ. ದೆಹಲಿ ಸರಕಾರವು ರೋಹಿಂಗ್ಯಾಗಳಿಗೆ ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ನಾವು ಅವರಿಗೆ ಕೇವಲ, ರೋಹಿಂಗ್ಯಾಗಳು ಸಧ್ಯ ಇರುವ ಸ್ಥಳದಲ್ಲಿಯೇ ಕಾಯಂ ಆಗಿ ಇರುವಂತೆ ಖಚಿತ ಮಾಡಿಕೊಳ್ಳಬೇಕು’ ಎಂದು ಆದೇಶ ನೀಡಿದ್ದೇವೆ. ಕಾರಣ ಅವರಿಗೆ ಭಾರತದಿಂದ ಗಡಿಪಾರು ಮಾಡಲು ನಾವು ಈಗಾಗಲೇ ಅವರ ದೇಶದೊಂದಿಗೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.

ಭಾಜಪದ ದೆಹಲಿಯ ಮುಖಂಡ ಕಪಿಲ ಮಿಶ್ರಾ ಇವರ ವಿರೋಧ

ಭಾಜಪದ ದೆಹಲಿಯ ಮುಖಂಡ ಕಪಿಲ ಮಿಶ್ರಾ ಇವರು ಟ್ವೀಟ ಮಾಡಿ, ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನರು ನಿರಾಶ್ರಿತರಲ್ಲ. ಅವರು ನುಸುಳುಕೋರರಾಗಿದ್ದಾರೆ. ಮಾದಕ ವಸ್ತು, ಮಾನವ ಕಳ್ಳ ಸಾಗಾಣಿಕೆ ಮತ್ತು ಜಿಹಾದ ಇವು ಅವರ ವಸತಿಯಿಂದ ನಡೆಯುತ್ತಿದೆ. ಅವರನ್ನು ವಶಕ್ಕೆ ಪಡೆದು ಅವರ ದೇಶಕ್ಕೆ ಕಳುಹಿಸಬೇಕು. ಇದೇ ಇದರ ಮೇಲಿನ ಏಕೈಕ ಉಪಾಯವಾಗಿದೆ.

ರೋಹಿಂಗ್ಯಾಗಳ ಬದಲಾಗಿ ಕಾಶ್ಮೀರಿ ಹಿಂದೂ, ಅಫಘಾನಿಸ್ತಾನದಿಂದ ಬಂದಿರುವ ಹಿಂದೂ ಮತ್ತು ಸಿಖ್ಖರಿಗೆ ಬಹುಮಹಡಿ ಕಟ್ಟಡ ಮತ್ತು ಸುರಕ್ಷೆಯನ್ನು ನೀಡಬೇಕು. ಪಾಕಿಸ್ತಾನದಿಂದ ಬಂದಿರುವ ಹಿಂದೂ ನಿರಾಶ್ರಿತರು ಅನೇಕ ವರ್ಷಗಳಿಂದ ವಿದ್ಯುತ್ ಇಲ್ಲದೆ ಗುಡಿಸಿಲಿನಿಲ್ಲಿ ವಾಸಿಸಬೇಕಾಗುತ್ತಿದೆ. ಅವರಿಗೆ ಸರಕಾರದ ನಿರಾಶ್ರಿತರ ಕುರಿತ ಯೋಜನೆಯ ಲಾಭ ಇಲ್ಲಿಯವರೆಗೂ ಸಿಕ್ಕಿಲ್ಲ.

ರೋಹಿಂಗ್ಯಾಗಳನ್ನು ಅವರ ದೇಶಕ್ಕೆ ಕಳುಹಿಸಿರಿ ! – ವಿಹಿಂಪ ವಿರೋಧ

ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯಕಾರಿ ಅಧ್ಯಕ್ಷ ಆಲೋಕ ಕುಮಾರ ಇವರು, ನಾವು ಹರದೀಪ ಪುರಿಯವರಿಗೆ ನೆನಪು ಮಾಡಿಕೊಡಲು ಇಚ್ಛಿಸುವುದೇನೆಂದರೆ, ಕೇಂದ್ರ ಗೃಹ ಸಚಿವರಾಗಿರುವ ಅಮಿತ ಶಹಾ ಇವರು ಡಿಸೆಂಬರ ೧೦, ೨೦೨೦ ರಂದು ‘ಭಾರತ ರೋಹಿಂಗ್ಯಾಗಳಿಗೆ ಎಂದಿಗೂ ಸ್ವೀಕರಿಸುವುದಿಲ್ಲ.’ ‘ರೋಹಿಂಗ್ಯಾ ನಿರಾಶ್ರಿರಲ್ಲ, ಅವರು ನುಸುಳುಖೋರರು ಆಗಿದ್ದಾರೆ’, ಎಂದು ಹೇಳಿದ್ದರು. ಇದನ್ನೇ ಭಾರತ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಹೇಳಿದೆ. ನಾವು ಸರಕಾರಕ್ಕೆ ಅದರ ಈಗಿನ ನಿರ್ಣಯದ ಬಗ್ಗೆ ಪುನರ್ವಿಚಾರ ಮಾಡುವಂತೆ ಕರೆ ನೀಡುತ್ತೇವೆ ಮತ್ತು ರೋಹಿಂಗ್ಯಾಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸುವಂತೆ ಕೋರುತ್ತೇವೆ ಎಂದು ಹೇಳಿದರು.

ದೇಶದಲ್ಲಿ ರೋಹಿಂಗ್ಯಾಗಳನ್ನು ಕರೆತರುವ ಮತ್ತು ಅವರಿಗೆ ವಾಸ್ತವ್ಯ ನೀಡಿರುವವರು ಭಾಜಪದವರೇ ! – ಆಮ ಆದ್ಮಿ ಪಕ್ಷ

ದೆಹಲಿಯ ಆಮ ಆದ್ಮಿ ಪಕ್ಷದ ಸರಕಾರವು ಕೇಂದ್ರ ಸರಕಾರದ ಈ ನಿರ್ಧಾರವನ್ನು ವಿರೋಧಿಸಿದೆ. ದೆಹಲಿಯ ನಾಗರಿಕರು ಇದಕ್ಕೆ ಅನುಮತಿ ನೀಡುವುದಿಲ್ಲವೆಂದು ‘ಆಪ್ ‘ ಸರಕಾರವು ಹೇಳಿದೆ. ‘ಆಪ್’ ಮುಖಂಡ ಸೌರಭ ಭಾರದ್ವಾಜ ಇವರು ಟ್ವೀಟ ಮಾಡಿ, ದೇಶದಲ್ಲಿ ರೋಹಿಂಗ್ಯಾಗಳನ್ನು ತಂದಿರುವವರು ಮತ್ತು ಅವರಿಗೆ ವಾಸ್ತವ್ಯ ಕಲ್ಪಿಸಿರುವವರು ಭಾಜಪದವರೇ ಆಗಿದ್ದಾರೆ. ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುವ ಭಾಜಪದ ಷಡ್ಯಂತ್ರ್ಯ ಬಯಲಾಗಿದೆ. ಭಾಜಪ ತಾನು ರೋಹಿಂಗ್ಯಾಗಳನ್ನು ದೆಹಲಿಯಲ್ಲಿ ವಾಸಿಸಲು ಅವಕಾಶ ಕೊಟ್ಟಿದೆಯೆಂದು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.