ಕರೋನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ಹೋರಾಡಬೇಕು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ನವ ದೆಹಲಿ : ಭಾರತದ ಜನಸಂಖ್ಯೆಯು ಇತರ ದೇಶಗಳಿಗಿಂತ ಅನೇಕ ಪಟ್ಟು ಹೆಚ್ಚಿದೆ. ಆದರೂ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕರೋನಾ ವೇಗವಾಗಿ ಹರಡಲಿಲ್ಲ. ಕರೋನಾದಿಂದ ಉಂಟಾಗುವ ಸಾವಿನ ಪ್ರಮಾಣ ನಮ್ಮ ದೇಶದಲ್ಲಿ ಕಡಿಮೆ ಇದೆ. ಇದರಿಂದಾದ ಹಾನಿಗಾಗಿ ಎಲ್ಲರಿಗೂ ದುಃಖ ಇದೆ; ಇದರ ಹೊರತಾಗಿಯೂ ನಮಗೆ ಏನೆಲ್ಲಾ ಉಳಿಸಲು ಸಾಧ್ಯವಾಯಿತೋ ಅದು ಖಂಡಿತವಾಗಿಯೂ ದೇಶದ ಸಾಮೂಹಿಕ ಸಂಕಲ್ಪಶಕ್ತಿಯ ಪರಿಣಾಮವಾಗಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು. ‘ಮನ್ ಕಿ ಬಾತ್’ ಈ ಆಕಾಶವಾಣಿ ಕಾರ್ಯಕ್ರಮದ ಮೂಲಕ ಜನರೊಂದಿಗೆ ಚರ್ಚೆ ನಡೆಸಿದರು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತ, ‘ನಾವು ಎಚ್ಚರಿಕೆಯನ್ನು ವಹಿಸುತ್ತ ವಾಯುಸಾರಿಗೆ ಪ್ರಾರಂಭಿಸಿದ್ದೇವೆ, ಅದೇರೀತಿ ಔದ್ಯೋಗಿಕ ವ್ಯವಹಾರವನ್ನೂ ಆರಂಭವಾಗಿದೆ. ಸ್ವಲ್ಪದರಲ್ಲಿ ಹೇಳುವುದಾದರೆ ಆರ್ಥಿಕತೆಯನ್ನು ಹೆಚ್ಚಿಸುವ ಕೈಗಾರಿಕೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ, ನಾವು ಹೆಚ್ಚು ಜಾಗರೂಕರಾಗಿರಬೇಕು’, ಎಂದರು.

ಶ್ರಮಿಕವರ್ಗದ ದುಃಖವನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ !

ಪ್ರಧಾನಿ ಮೋದಿ ಮುಂದೆ ಮಾತನಾಡುತ್ತಾ, ‘ಪ್ರಸ್ತುತ ದೇಶದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸದ ಯಾವುದೇ ವರ್ಗವಿಲ್ಲ. ಕರೋನಾ ಬಿಕ್ಕಟ್ಟಿನಿಂದ ಹೆಚ್ಚು ಪರಿಣಾಮ ಬಡವರು, ಕಾರ್ಮಿಕ ವರ್ಗ ಮತ್ತು ಶ್ರಮಿಕ ವರ್ಗದ ಮೇಲಾಗಿದೆ. ಅವರ ಕಷ್ಟಗಳು, ದುಃಖಗಳು ಮತ್ತು ಸಂಕಟಗಳನ್ನು ನಾವು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇಂದು ಶ್ರಮಿಕರ ಸಂಕಟಗಳಿಂದಾಗಿ, ನಮಗೆ ಪೂರ್ವ ಭಾರತದ ಜನರ ಕಷ್ಟ, ಕಾರ್ಪಣ್ಯಗಳು ಅರ್ಥವಾಯಿತು. ಪೂರ್ವ ಭಾರತದ ಅಭಿವೃದ್ಧಿ ಆಗುವುದು ಅಗತ್ಯವಿದೆ.’

sಭಾರತೀಯರ ಸೇವಾ ಮನೋಭಾವದಿಂದಾಗಿ ಕರೋನಾವನ್ನು ತಡೆಗಟ್ಟಲು ಸಾಧ್ಯ !

ಪ್ರಧಾನ ಮಂತ್ರಿ ಮೋದಿಯವರು ತಮ್ಮ ಮಾತನ್ನು ಮುಂದುವರಿಸುತ್ತ, ‘ಈ ಹೋರಾಟವು ಜನರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಹೋರಾಟವು ಬಹಳ ಕಾಲದವರೆಗೆ ನಡೆಯಲಿದ್ದು ಭಾರತೀಯರ ಸೇವಾ ಮನೋಭಾವದಿಂದಾಗಿ ಕರೋನಾವನ್ನು ತಡೆಗಟ್ಟಲು ಯಶಸ್ಸು ಸಿಕ್ಕಿದೆ. ನಮ್ಮ ದೇಶವಾಸಿಗಳ ಸೇವಾಶಕ್ತಿ ನಮ್ಮ ನಿಜವಾದ ಶಕ್ತಿಯಾಗಿದೆ’, ಎಂದರು.