ಸಮೋಸ ತಿನ್ನಲು ರೈಲು ಚಾಲಕ ರೈಲು ನಿಲ್ಲಿಸಿದ ವಿಡಿಯೋ ದಾರಿ ತಪ್ಪಿಸುವಂತದ್ದು! – ರೈಲ್ವೆ ಇಲಾಖೆ : Railway Viral Video

ವಿಡಿಯೋದಲ್ಲಿ ತೋರಿಸಲಾದ ಪ್ರಯಾಣಿಕರ ರೈಲು ಅಲ್ಲ ಗೂಡ್ಸ್ ರೈಲು ಎಂದು ರೈಲ್ವೆ ಇಲಾಖೆ ಸ್ಪಷ್ಟನೆ !

ಇಂದೋರ್ (ಮಧ್ಯಪ್ರದೇಶ) – ಸಮೋಸ ಖರೀದಿಸಲು ರೈಲು ಚಾಲಕ ರೈಲು ನಿಲ್ಲಿಸಿದ್ದಾನೆ ಎಂಬ ವಿಡಿಯೋ ದಾರಿ ತಪ್ಪಿಸುವಂತದ್ದಾಗಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಸಂಬಂಧಪಟ್ಟ ವಿಡಿಯೋ ಇಂದೋರ್-ಮಹೂ ಡೆಮು ಪ್ಯಾಸೆಂಜರ್ ರೈಲಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಅದು ಗೂಡ್ಸ್ ರೈಲಾಗಿದ್ದು, ತಪ್ಪು ಮಾಹಿತಿಯೊಂದಿಗೆ ಇದನ್ನು ಪ್ರಸಾರ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ಸಂಬಂಧಿತ ಗೂಡ್ಸ್ ರೈಲನ್ನು ‘ರಾವೂ ಹೋಮ್ ಸಿಗ್ನಲ್’ ಬಳಿ ಯೋಜಿತ ಇಂಜಿನಿಯರಿಂಗ್ ಕೆಲಸಕ್ಕಾಗಿ ಅಧಿಕೃತವಾಗಿ ನಿಲ್ಲಿಸಲಾಗಿತ್ತು. ಈ ನಿಲುಗಡೆಯ ಸಮಯದಲ್ಲಿ, ಸಹಾಯಕ ಚಾಲಕನು ಹತ್ತಿರದಲ್ಲೇ ಸಮೋಸ ಮತ್ತು ಕಚೋರಿಗಳನ್ನು ಖರೀದಿಸಿದ್ದನು; ಆದರೆ ಈ ಘಟನೆಯನ್ನು ತಿರುಚಿ, ವೈಯಕ್ತಿಕ ಕಾರಣಗಳಿಗಾಗಿ ಪ್ರಯಾಣಿಕರ ರೈಲನ್ನು ನಿಲ್ಲಿಸಲಾಗಿದೆ ಎಂಬ ವದಂತಿಯನ್ನು ಹರಡಲಾಗಿದೆ. ಅಧಿಕೃತ ನಿಲುಗಡೆಯನ್ನು ಹೊರತುಪಡಿಸಿ ಯಾವುದೇ ಅನಧಿಕೃತ ನಿಲುಗಡೆ ಮಾಡಲಾಗಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ರೈಲ್ವೆ ಇಲಾಖೆಯು ಈ ಬಗ್ಗೆ ಆಂತರಿಕ ತನಿಖೆಯನ್ನು ಮುಂದುವರಿಸಿದ್ದು, ಅಧಿಕೃತ ನಿಲುಗಡೆಯ ಸಮಯದಲ್ಲಿ ಭದ್ರತೆ ಅಥವಾ ಸೇವಾ ನಿಯಮಗಳ ಯಾವುದೇ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಲಾಗುವುದು.

ಸಂಪಾದಕೀಯ ನಿಲುವು

ಇಂತಹ ದಾರಿ ತಪ್ಪಿಸುವ ವಿಡಿಯೋಗಳನ್ನು ಪ್ರಸಾರ ಮಾಡುವವರನ್ನು ಜೀವಾವಧಿ ಶಿಕ್ಷೆ ನೀಡಬೇಕು, ಆಗಲೇ ಇಂತಹ ಕೃತ್ಯವನ್ನು ಮಾಡಲು ಯಾರೂ ಧೈರ್ಯ ಪಡುವುದಿಲ್ಲ!