ಚಿಕ್ಕಬಳ್ಳಾಪುರ: ಪೆಟ್ರೋಲ್ ಟ್ಯಾಂಕರ್ ಬೆಂಕಿ; ಹಾಲಿನ ಟ್ಯಾಂಕರ್‌ಗೂ ವ್ಯಾಪಿಸಿದ ಜ್ವಾಲೆ : Petrol Tanker Accident

ಚಿಕ್ಕಬಳ್ಳಾಪುರ – ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ ಲಾರಿಯೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಸಮೀಪ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮರಕ್ಕೆ ಡಿಕ್ಕಿ ಹೊಡೆದ ಕೂಡಲೇ ಪೆಟ್ರೋಲ್ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಜ್ವಾಲೆಗಳು ಸಮೀಪದಲ್ಲಿ ರಿವರ್ಸ್‌ ತೆಗೆದುಕೊಳ್ಳುತ್ತಿದ್ದ ಹಾಲಿನ ಟ್ಯಾಂಕರ್‌ಗೂ ವ್ಯಾಪಿಸಿವೆ. ಬೆಂಕಿ ಕ್ಷಣಾರ್ಧದಲ್ಲೇ ಎರಡೂ ವಾಹನಗಳನ್ನು ಆವರಿಸಿದರೂ, ಚಾಲಕರು ಸಮಯಪ್ರಜ್ಞೆಯಿಂದ ಲಾರಿಯಿಂದ ಹೊರಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿಯ ತೀವ್ರತೆಗೆ ಎರಡೂ ಲಾರಿಗಳು ಬಹುತೇಕ ಸುಟ್ಟು ಭಸ್ಮವಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.