ಜಗದ್ಗುರು ಸಂತ ತುಕಾರಾಂ ಮಹಾರಾಜರ ಪಲ್ಲಕ್ಕಿ ಭಕ್ತಿಮಯ ವಾತಾವರಣದಲ್ಲಿ ದೇಹೂನಿಂದ ಪ್ರಸ್ಥಾನ!

ನೂತನ ಬೆಳ್ಳಿಯ ರಥದಲ್ಲಿ ಪಾದುಕೆಗಳ ಉತ್ಸವ!

ದೇಹೂ (ಪುಣೆ ಜಿಲ್ಲೆ) – ‘ಜ್ಞಾನೋಬಾ-ತುಕಾರಾಂ’ ಮತ್ತು ‘ವಿಠ್ಠಲ-ವಿಠ್ಠಲ’ ಎಂಬ ಅಖಂಡ ಜಯಘೋಷ ಹಾಗೂ ತಾಳ-ಮೃದಂಗಗಳ ನಾದದೊಂದಿಗೆ ಜಗದ್ಗುರು ಸಂತ ತುಕಾರಾಂ ಮಹಾರಾಜರ ೩೪೧ನೇ ಆಷಾಢ ಪಾದಯಾತ್ರೆ (ವಾರಿ) ಪಲ್ಲಕ್ಕಿ ಉತ್ಸವವು ಜುಲೈ ೭ ರಂದು ಶ್ರೀ ಕ್ಷೇತ್ರ ದೇಹೂನಿಂದ ಅತ್ಯಂತ ಭಕ್ತಿಮಯ ವಾತಾವರಣದಲ್ಲಿ ಪ್ರಸ್ಥಾನಗೊಂಡಿತು. ಮಧ್ಯಾಹ್ನ ೨ ರಿಂದ ೪ ಗಂಟೆಯವರೆಗೆ ವಿಧಿವತ್ತಾಗಿ ಪೂಜೆ ನೆರವೇರಿತು. ಈ ಉತ್ಸವದಲ್ಲಿ ರಾಜ್ಯದಾದ್ಯಂತ ಆಗಮಿಸಿದ್ದ ಲಕ್ಷಾಂತರ ವಾರಕರಿಗಳು (ಭಕ್ತರು), ಪ್ರಮುಖ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಪ್ರಸ್ಥಾನೋತ್ಸವದ ಹಿನ್ನೆಲೆಯಲ್ಲಿ ಇಡೀ ದೇಹೂ ನಗರಿ ಭಕ್ತಿಮಯ ವಾತಾವರಣದಲ್ಲಿ ತಲ್ಲೀನವಾಗಿತ್ತು. ಪಲ್ಲಕ್ಕಿಯ ಮೊದಲ ವಾಸ್ತವ್ಯ ದೇಹೂನ ಇನಾಮ್ದಾರ್ ವಾಡಾದಲ್ಲಿ ಇರಲಿದೆ.

ಪ್ರಸ್ಥಾನೋತ್ಸವದ ಕಾರ್ಯಕ್ರಮಗಳು ಮುಂಜಾನೆ ೫ ಗಂಟೆಯಿಂದಲೇ ಆರಂಭಗೊಂಡವು. ಶಿಲಾ ಮಂದಿರ ಹಾಗೂ ತಪೋನಿಧಿ ನಾರಾಯಣ ಮಹಾರಾಜರ ಸಮಾಧಿ ಮಂದಿರದಲ್ಲಿ ಟ್ರಸ್ಟಿಗಳ ವತಿಯಿಂದ ಮಹಾಪೂಜೆ ನೆರವೇರಿತು. ಇನಾಮ್ದಾರ್ ವಾಡಾದಲ್ಲಿ ಜಗದ್ಗುರು ತುಕೋಬಾರ ಪಾದುಕೆಗಳ ಪೂಜೆ ನಡೆಯಿತು. ತದನಂತರ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ದೇಹೂಕರ ಮಹಾರಾಜರ ‘ಕಾಲ್ಯಾಚೆ ಕೀರ್ತನ’ ನಡೆಯಿತು.

ಬ್ರಹ್ಮವೃಂದದ ಸಮ್ಮುಖದಲ್ಲಿ ಮಂತ್ರಘೋಷಗಳೊಂದಿಗೆ ಪಾದುಕಾ ಪೂಜೆ!

ಮಧ್ಯಾಹ್ನ ೨.೩೦ಕ್ಕೆ ಇನಾಮ್ದಾರ್ ವಾಡಾದಿಂದ ಮಹಾರಾಜರ ಪಾದುಕೆಗಳನ್ನು ದೇವೂಳವಾಡಾದ ಭಜನಾ ಮಂಟಪಕ್ಕೆ ತರಲಾಯಿತು. ಬಳಿಕ ಪ್ರಸ್ಥಾನೋತ್ಸವದ ಕಾರ್ಯಕ್ರಮ ಆರಂಭವಾಯಿತು. ಈ ವೇಳೆ ಆಗಮಿಸಿದ್ದ ವಿವಿಧ ‘ದಿಂಡಿ’ಗಳಿಗೆ ಮಂದಿರದೊಳಗೆ ಪ್ರವೇಶ ನೀಡಲಾಯಿತು. ಬ್ರಹ್ಮವೃಂದದ ಸಮ್ಮುಖದಲ್ಲಿ ಮಂತ್ರಘೋಷಗಳೊಂದಿಗೆ ಪಾದುಕಾ ಪೂಜೆ ನೆರವೇರಿತು. ಬೆಳ್ಳಿಯ ಸಿಂಹಾಸನದ ಮೇಲೆ ಇರಿಸಿದ್ದ ಬೆಳ್ಳಿಯ ತಟ್ಟೆಯಲ್ಲಿದ್ದ ಬೆಳ್ಳಿಯ ಪಾದುಕೆಗಳಿಗೆ ಅಭಿಷೇಕ ಮಾಡಲಾಯಿತು. ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಶಿವಸೇನೆಯ ಸಂಸದ ಶ್ರೀರಂಗ ಬಾರ್ಣೆ, ಮಾಜಿ ಸಂಸದ ಛತ್ರಪತಿ ಸಂಭಾಜಿರಾಜೆ, ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಸುನಿಲ್ ಶೆಳಕೆ, ಭಾಜಪ ಶಾಸಕ ಮಹೇಶ್ ಲಾಂಡಗೆ ಅವರ ಹಸ್ತದಿಂದ ಪಾದುಕೆಗಳ ಪೂಜೆ ನೆರವೇರಿತು. ಮಧ್ಯಾಹ್ನ ೪ ಗಂಟೆ ೨ ನಿಮಿಷಕ್ಕೆ ಪಲ್ಲಕ್ಕಿ ಪ್ರಸ್ಥಾನ ಮಾಡಿತು.

ಮೊದಲ ಬಾರಿಗೆ ನೂತನ ಬೆಳ್ಳಿಯ ರಥದಲ್ಲಿ ಪಲ್ಲಕ್ಕಿ ಪ್ರಸ್ಥಾನ!

ಈ ವರ್ಷದ ವಾರಿಯ ಮತ್ತೊಂದು ವೈಶಿಷ್ಟ್ಯವೆಂದರೆ, ಜಗದ್ಗುರು ಸಂತ ತುಕಾರಾಂ ಮಹಾರಾಜರ ಪಾದುಕೆಗಳು ಇದೇ ಮೊದಲ ಬಾರಿಗೆ ಹೊಸದಾಗಿ ಸಿದ್ಧಪಡಿಸಲಾದ ಬೆಳ್ಳಿಯ ರಥದಲ್ಲಿ ವಿರಾಜಮಾನವಾಗಲಿವೆ. ಈ ನೂತನ ರಥದ ತೂಕವನ್ನು ಹಳೆಯ ರಥಕ್ಕೆ ಹೋಲಿಸಿದರೆ ೬೦೦ ಕೆ.ಜಿ.ಯಷ್ಟು ಕಡಿಮೆ ಮಾಡಲಾಗಿದೆ.

ಇನಾಮ್ದಾರ್ ವಾಡಾದಲ್ಲಿ ಪಲ್ಲಕ್ಕಿ ಉತ್ಸವದ ವಾಸ್ತವ್ಯ!

ಸಂಜೆ ೫ ಗಂಟೆಗೆ ಪಲ್ಲಕ್ಕಿ ಪ್ರದಕ್ಷಿಣೆ ಮುಗಿದ ಬಳಿಕ ಪಲ್ಲಕ್ಕಿಯು ಇನಾಮ್ದಾರ್ ವಾಡಾದತ್ತ ಸಾಗಿತು. ರಾತ್ರಿ ಅಲ್ಲಿಯೇ ಪಲ್ಲಕ್ಕಿ ಉತ್ಸವದ ವಾಸ್ತವ್ಯ ಇರಲಿದೆ. ತದನಂತರ ಪಲ್ಲಕ್ಕಿಯು ಆಕುರ್ಡಿ, ಪುಣೆ ನಗರ (ನಾನಾ ಪೇಠ, ನಿವಡುಂಗಾ ವಿಠೋಬಾ ಮಂದಿರ), ಲೋಣಿ ಕಾಳಭೋರ್ ಮಾರ್ಗವಾಗಿ ಪಂಢರಪುರದತ್ತ ಸಾಗಲಿದೆ.

ಮಳೆ ಬಿಡುವು!

ಇಂದ್ರಾಯಣಿ ನದಿಯ ನೀರಿನ ಮಟ್ಟ ಏರುತ್ತಿರುವುದು ಮತ್ತು ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು, ವಾರಕರಿಗಳು ದೇಹೂ ಮತ್ತು ಆಳಂದಿಯಲ್ಲಿ ಜನದಟ್ಟಣೆ ಮಾಡದೆ ನೇರವಾಗಿ ಪುಣೆ, ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಅಥವಾ ಅದರ ಮುಂದಿನ ಮಾರ್ಗದಲ್ಲಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಎರಡೂ ದೇವಸ್ಥಾನ ಆಡಳಿತ ಮಂಡಳಿಗಳು ಮನವಿ ಮಾಡಿದ್ದವು. ಆದರೆ, ಜುಲೈ ೭ರಂದು ಬೆಳಗ್ಗಿನಿಂದಲೇ ಮಳೆ ಬಿಡುವು ನೀಡಿದ್ದರಿಂದ ವಾರಕರಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಹೂಗೆ ಆಗಮಿಸಿದ್ದರು.