೬೦ ವರ್ಷಗಳ ಹಿಂದಿನ ‘ತಮಿಳು ರಾಷ್ಟ್ರ’ದ ಬೇಡಿಕೆಯನ್ನು ಪ್ರಸ್ತುತ ಇತಿಹಾಸ ಎಂದು ಹೇಳುವುದು ‘ದೇಶದ್ರೋಹ’ವಲ್ಲ!

ಮದ್ರಾಸ್ ಹೈಕೋರ್ಟ್ ತೀರ್ಪು

ನವದೆಹಲಿ – ಪುಸ್ತಕವೊಂದರಲ್ಲಿ ೧೯೬೭ರ ಸ್ವತಂತ್ರ ತಮಿಳುನಾಡಿನ ಬೇಡಿಕೆಯ ಬಗ್ಗೆ ಕೇವಲ ಐತಿಹಾಸಿಕ ಉಲ್ಲೇಖ ಮಾಡುವುದನ್ನು ಪ್ರಸ್ತುತ ದಿನಗಳಲ್ಲಿ ‘ದೇಶದ್ರೋಹ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಐತಿಹಾಸಿಕ ಘಟನೆಯೊಂದನ್ನು ದಾಖಲಿಸುವುದು ಮತ್ತು ವರ್ತಮಾನದಲ್ಲಿ ಪ್ರತ್ಯೇಕತಾವಾದಕ್ಕೆ ಪ್ರಚೋದನೆ ನೀಡುವುದು ಇವೆರಡರ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಇಂತಹ ಪ್ರಕರಣಗಳ ಮೌಲ್ಯಮಾಪನವನ್ನು ಇಂದಿನ ಸಾಮಾಜಿಕ ಪರಿಸ್ಥಿತಿಯ ಆಧಾರದ ಮೇಲೆ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

*ನ್ಯಾಯಾಲಯವು ಸ್ಪಷ್ಟಪಡಿಸಿದೆ,

೧. ದೇಶದ್ರೋಹದ ಮೂಲ ಸಾರವೆಂದರೆ ಸರಕಾರದ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಸೃಷ್ಟಿಸುವುದು ಅಥವಾ ಅದಕ್ಕೆ ಪ್ರಯತ್ನಿಸುವುದಾಗಿದೆ.

. ಆದ್ದರಿಂದ, ಯಾವುದೇ ಹೇಳಿಕೆಯ ಮೌಲ್ಯಮಾಪನವನ್ನು ಆ ಕಾಲದ ಸಾಮಾಜಿಕ ಮತ್ತು ರಾಷ್ಟ್ರೀಯ ಪರಿಸರವನ್ನು ಪರಿಗಣಿಸಿ ಮಾಡಬೇಕಾಗುತ್ತದೆ.

೩. ಯಾವುದೇ ಇತಿಹಾಸದ ಪುಸ್ತಕದಲ್ಲಿ, ಸಂಶೋಧನೆಯಲ್ಲಿ ಅಥವಾ ದಾಖಲೆಯಲ್ಲಿ ಭೂತಕಾಲದ ಘಟನೆಗಳನ್ನು ಉಲ್ಲೇಖಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿರಬಹುದು. ಒಂದು ವೇಳೆ ಪ್ರಕಟಣೆಯು ಕೇವಲ ಹಳೆಯ ಕಾಲದ ಘಟನೆಗಳ ದಾಖಲೆಯನ್ನು ಇರಿಸುತ್ತಿದ್ದು, ಪ್ರಸ್ತುತ ಜನರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿಲ್ಲ ಎಂದಾದರೆ, ಅದನ್ನು ದೇಶದ್ರೋಹ ಎನ್ನಲು ಸಾಧ್ಯವಿಲ್ಲ.

೪. ಭಾರತದಲ್ಲಿ ೧೯೬೭ರ ರಾಜಕೀಯ ವಾತಾವರಣವು ಇಂದಿನ ಕಾಲಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಇಂದು ಭಾರತವು ಸಾಮಾಜಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸಂಘಟಿತವಾಗಿದೆ ಮತ್ತು ಇಂತಹ ಐತಿಹಾಸಿಕ ಹೇಳಿಕೆಗಳಿಂದ ಸಾಮಾನ್ಯ ಜನರಲ್ಲಿ ಸರಕಾರದ ಬಗ್ಗೆ ದ್ವೇಷ ಮೂಡುವ ಸಾಧ್ಯತೆಯಿಲ್ಲ.

೫. ಸಂಬಂಧಪಟ್ಟ ಪುಸ್ತಕದಲ್ಲಿ ಸ್ವತಂತ್ರ ರಾಷ್ಟ್ರದ ಬೇಡಿಕೆಯನ್ನು ಪ್ರಸ್ತುತ ಚಳವಳಿಯನ್ನಾಗಿ ಬಿಂಬಿಸಿಲ್ಲ. ಕೇವಲ ಇತಿಹಾಸದಲ್ಲಿ ನಡೆದ ಸಂಗತಿಗಳನ್ನು ಉಲ್ಲೇಖಿಸುವುದು ಇದು ದೇಶದ್ರೋಹದ ಅಪರಾಧವಾಗುವುದಿಲ್ಲ.

೬.ಯಾವುದೇ ಹೇಳಿಕೆಯನ್ನು ಅದರ ಸಂಪೂರ್ಣ ಸಂದರ್ಭದೊಂದಿಗೆ ಓದುವುದು ಅತ್ಯಗತ್ಯ. ಕೇವಲ ಒಂದು ಸಾಲು ಅಥವಾ ಒಂದು ಪ್ಯಾರಾವನ್ನು ಪ್ರತ್ಯೇಕಿಸಿ ಅಪರಾಧವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ.

೭. ಈ ದೃಷ್ಟಿಕೋನವು ಭವಿಷ್ಯದಲ್ಲಿ ಇತಿಹಾಸ, ಸಂಶೋಧನೆ ಮತ್ತು ಪ್ರಕಾಶನಕ್ಕೆ (ಪಬ್ಲಿಷಿಂಗ್) ಸಂಬಂಧಿಸಿದ ಪ್ರಕರಣಗಳಲ್ಲೂ ಪ್ರಮುಖ ಮಾರ್ಗದರ್ಶನ ನೀಡಬಲ್ಲದು.

೮. ಕ್ರಿಮಿನಲ್ ಕಾನೂನಿನ ಬಳಕೆಯು ಕೇವಲ ನಿಜವಾದ ಪ್ರಚೋದನೆ ಅಥವಾ ಹಿಂಸಾಚಾರಕ್ಕೆ ಪ್ರೇರೇಪಿಸುವ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರಬೇಕು.

ಏನಿದು ಪ್ರಕರಣ?

ದೇಶದ್ರೋಹಕ್ಕೆ ಸಂಬಂಧಿಸಿದ ಈ ಪ್ರಕರಣವು ‘ಕಳಗಂ ಪತಿಪ್ಪಗಂ’ ಎಂಬ ಪ್ರಕಾಶನ ಸಂಸ್ಥೆಗೆ ಸಂಬಂಧಿಸಿದ್ದಾಗಿದೆ, ಇದರ ನಿರ್ದೇಶಕರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು. ೨೦೧೪ ರಲ್ಲಿ ಪ್ರಕಟವಾದ ಪುಸ್ತಕವೊಂದರಲ್ಲಿ, ೧೯೬೭ ರಲ್ಲಿ ತಮಿಳರಸನ್ ಎಂಬುವವರು ತಮಿಳುನಾಡನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ಮಾಡಿದ್ದ ಬೇಡಿಕೆ ಮತ್ತು ಗೆರಿಲ್ಲಾ ಯುದ್ಧದ (ಗನಿಮಿ ಕಾವ್ಯ) ಉಲ್ಲೇಖವಿತ್ತು. ಇದೇ ಆಧಾರದ ಮೇಲೆ ಪ್ರಕಾಶಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ದೇಶದ್ರೋಹದ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಲೇಖಕ ಇಲಾಂಗೋವನ್ ಅವರು ವಿಚಾರಣೆಯ ಅವಧಿಯಲ್ಲೇ ನಿಧನರಾಗಿದ್ದರು. ಹಾಗಾಗಿ ಇಬ್ಬರು ಪ್ರಕಾಶಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಈ ಕಾನೂನು ಕ್ರಮವನ್ನು ರದ್ದುಗೊಳಿಸುವಂತೆ ಕೋರಿದ್ದರು. ನ್ಯಾಯಾಲಯದಲ್ಲಿ ಅರ್ಜಿದಾರರು ತಮ್ಮ ಪುಸ್ತಕದಲ್ಲಿ ಕೇವಲ ಐತಿಹಾಸಿಕ ಘಟನೆಗಳನ್ನು ಉಲ್ಲೇಖಿಸಲಾಗಿದೆಯೇ ಹೊರತು, ವರ್ತಮಾನದಲ್ಲಿ ಪ್ರತ್ಯೇಕತಾವಾದದ ಪ್ರಚಾರ ಮಾಡುತ್ತಿಲ್ಲ ಮತ್ತು ಅವರಿಗೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ವಾದಿಸಿದ್ದರು.