ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿಯ ಮೂಲಕ ಮುಖ್ಯಮಂತ್ರಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹ!

  • ಶರದ ಪವಾರ್ ಅವರಿಂದ ‘ವೈಕುಂಠಾಗಮನ’ದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ

  • ಸಂತರ ಇತಿಹಾಸ ಮತ್ತು ವಾರಕರಿ ಅಸ್ಮಿತೆಯನ್ನು ಅವಮಾನಿಸಿರುವ ಆರೋಪ!

ಶರದ ಪವಾರ

ಮುಂಬಯಿ, ಜುಲೈ ೪ (ಸುದ್ದಿ.) – ಜಗದ್ಗುರು ಸಂತ ತುಕಾರಾಮ ಮಹಾರಾಜರ ೩೭೫ ನೇ ವೈಕುಂಠಾಗಮನ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಶರದ ಪವಾರ್ ಪಕ್ಷದ ಮುಖ್ಯಸ್ಥ ಶರದ ಪವಾರ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಬಳಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಪ್ರಸಕ್ತ ಆಷಾಢ ವಾರಿಯ ಪವಿತ್ರ ಕಾಲದಲ್ಲಿ ಹಿಂದೂ ಮತ್ತು ವಾರಕರಿ ಸಮಾಜದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪುಣೆಯ ಆಕುರ್ಡಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶರದ ಪವಾರ್ ಅವರು, ‘‘ಇಂದಿನ ಕಾಲದಲ್ಲಿ ವೈಕುಂಠಾಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ. ಒಂದು ನಿರ್ದಿಷ್ಟ ವರ್ಗವು ತನ್ನ ಕೃತ್ಯಗಳನ್ನು ಮುಚ್ಚಿಡಲು ಈ ಸಂಗತಿಗಳನ್ನು ಜನರ ಮೇಲೆ ಹೇರಿತು ಮತ್ತು ಅವುಗಳನ್ನು ನಿಜವೆಂದು ನಂಬುವಂತೆ ಮಾಡಿತು’’ಎಂದು ಹೇಳಿದ್ದರು. ಇದಕ್ಕೆ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮನವಿಯಲ್ಲಿ,

೧. ಜಗದ್ಗುರು ಸಂತ ತುಕಾರಾಮ ಮಹಾರಾಜರ ದೇಹ ಸಹಿತ ವೈಕುಂಠಾಗಮನವು ಕೇವಲ ಭಾವನಾತ್ಮಕ ಶ್ರದ್ಧೆಯಷ್ಟೇ ಅಲ್ಲ, ಈ ಘಟನೆಯು ವಾರಕರಿ ಪರಂಪರೆ ಮತ್ತು ಸಂತ ಸಾಹಿತ್ಯದ ಪವಿತ್ರ ತಿರುಳಾಗಿದೆ. ಸಂತ ಬಹಿಣಾಬಾಯಿ, ಸಂತ ನಿಳೋಬಾರಾಯ ಅವರ ಅಭಂಗಗಳಲ್ಲಿ, ಹಾಗೆಯೇ ಮಹಿಪತಿಬುವಾ ಅವರ ‘ಭಕ್ತವಿಜಯ’ ಮತ್ತು ‘ಭಕ್ತಲೀಲಾಮೃತ’ ಎಂಬ ಪ್ರಮಾಣಗ್ರಂಥಗಳಲ್ಲಿ ಇದರ ಸವಿಸ್ತಾರವಾದ ವರ್ಣನೆಯಿದೆ.

೨. ತಮ್ಮನ್ನು ಪ್ರಗತಿಪರ ಮತ್ತು ಬುದ್ಧಿಜೀವಿಗಳು ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜಕೀಯ ಪ್ರೇರಿತರಾಗಿ ಸಂತರ ಇತಿಹಾಸ ಮತ್ತು ವಾರಕರಿ ಅಸ್ಮಿತೆಯನ್ನು ತಿರುಚಲಾಗುತ್ತಿದೆ.

೩. ಶರದ ಪವಾರ್ ಅವರು ಈ ಹಿಂದೆಯೂ ವಾರಕರಿ ಸಂಪ್ರದಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಮತಾಂಧರೆಂದು ಬಿಂಬಿಸಲು ಪ್ರಯತ್ನಿಸಿದ್ದರು ಮತ್ತು ಹಿಂದೂ ದೇವತೆಗಳ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರಿಗೆ ಮೂಕಸಮ್ಮತಿಯನ್ನು ನೀಡಿದ್ದರು.

೪. ‘ಹಿಂದೂ ಧರ್ಮ ಮತ್ತು ವಾರಕರಿ ಸಂಪ್ರದಾಯದ ಶ್ರದ್ಧೆಗಳನ್ನು ಪದೇ ಪದೇ ಹತ್ತಿಕ್ಕುವ ಹಕ್ಕನ್ನು ಯಾರಿಗೂ ನೀಡಿಲ್ಲ’, ಎಂಬ ತೀವ್ರ ಆಕ್ರೋಶದ ಪ್ರತಿಕ್ರಿಯೆಯನ್ನು ವಾರಕರಿ ಸಂಘಟನೆಗಳು ಮತ್ತು ವಿಚಾರವಂತರು ವ್ಯಕ್ತಪಡಿಸುತ್ತಿದ್ದಾರೆ.

೫. ‘ಈ ಎಲ್ಲಾ ಹಿನ್ನೆಲೆಯಲ್ಲಿ ಶರದ ಪವಾರ ಅವರು ವೈಕುಂಠಾಗಮನದ ಕುರಿತಾದ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಸಮಸ್ತ ವಾರಕರಿ ಸಂಪ್ರದಾಯ, ವಿಠ್ಠಲ ಭಕ್ತರು ಹಾಗೂ ಹಿಂದೂ ಬಾಂಧವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು’, ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

೬. ಮಹಾರಾಷ್ಟ್ರದ ಸಾಮಾಜಿಕ ಸೌಹಾರ್ದತೆಯನ್ನು ಕದಡುವ ಮತ್ತು ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ವೈಚಾರಿಕ ದ್ವೇಷವನ್ನು ಮೂಡಿಸಲು ಪ್ರಯತ್ನಿಸಿರುವ ಪ್ರಕರಣದ ಬಗ್ಗೆ ಗೃಹ ಸಚಿವಾಲಯ ಹಾಗೂ ರಾಜ್ಯ ಸರಕಾರವು ಗಂಭೀರ ಗಮನ ಹರಿಸಿ ಸೂಕ್ತ ಕಾನೂನು ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಲ್ಲಿ ಕಳಕಳಿಯಿಂದ ವಿನಂತಿಸಲಾಗಿದೆ.