ಪ್ರಗತಿಪರ ನಟ ಪ್ರಕಾಶ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ನ್ಯಾಯಾಲಯವು ಸಮನ್ಸ್ ಮತ್ತು ವಾರೆಂಟ್ ಜಾರಿಗೊಳಿಸಿದರೂ ಪ್ರಕಾಶ ರಾಜ್ ಅವರಿಂದ ನಿರ್ಲಕ್ಷ್ಯ

ಬೆಂಗಳೂರು – ಬಹುಭಾಷಾ ನಟ ಪ್ರಕಾಶ ರಾಜ್ ಅವರು ಒಂದೇ ಹೆಸರಿನಲ್ಲಿ 4 ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂಬ ಆರೋಪವಿದ್ದು, ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

1. ದಿಲೀಪ ಕುಮಾರ್ ಎಂಬುವವರು ಸಲ್ಲಿಸಿದ ದೂರಿನ ನಂತರ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಪ್ರಕಾಶ ರಾಜ್ ಒಂದೇ ಹೆಸರಿನಲ್ಲಿ 4 ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂದು ದಿಲೀಪ್ ಕುಮಾರ್ ಆರೋಪಿಸಿದ್ದಾರೆ.

2. ಇದರ ನಂತರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕಾಶ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು.

3. ಎರಡು ಬಾರಿ ಸಮನ್ಸ್ ಮತ್ತು ಎರಡು ಬಾರಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದರೂ ಪ್ರಕಾಶ ರಾಜ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ನ್ಯಾಯಾಲಯವು ಮೂರನೇ ಬಾರಿಗೆ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.

4. ಪ್ರಕಾಶ ರಾಜ್ ಅವರು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಈ 4 ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂಬ ಗಂಭೀರ ಆರೋಪವಿದೆ. ಸಂವಿಧಾನದ ಪ್ರಕಾರ, ಯಾವುದೇ ವ್ಯಕ್ತಿಗೆ ದೇಶದ ಯಾವುದೇ ಭಾಗದಲ್ಲಿ ಕೇವಲ ಒಂದು ಮತದಾರರ ಗುರುತಿನ ಚೀಟಿ ಹೊಂದಲು ಮಾತ್ರ ಅನುಮತಿಯಿದೆ; ಆದರೆ ನಟ ಪ್ರಕಾಶ ರಾಜ್ ಅವರು 4 ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

5. ಸಮನ್ಸ್ ಮತ್ತು ವಾರೆಂಟ್ ಅನ್ನು ನಿರ್ಲಕ್ಷಿಸಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ನ್ಯಾಯಾಲಯವು ಪ್ರಕಾಶ ರಾಜ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂಪಾದಕೀಯ ನಿಲುವು

ಇತರೆ ಸಮಯಗಳಲ್ಲಿ 'ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ಕೂಗುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಭಾಷಣ ಮಾಡುವ ಇಂತಹ ಪ್ರಗತಿಪರರು, ಸ್ವತಃ ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸುವ ಸಮಯ ಬಂದಾಗ ಹೇಗೆ ವರ್ತಿಸುತ್ತಾರೆ ಎಂಬುದು ಇದೇ ತಿಳಿಸುತ್ತದೆ!