ಅಮೆರಿಕದ ದಾಳಿಯಲ್ಲಿ ಮೂರು ಭಾರತೀಯರ ಸಾವು !

  • ಅಮೆರಿಕ-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಓಮನ್ ಸಮುದ್ರದಲ್ಲಿ ಕಾರ್ಯಾಚರಣೆ

  • ಭಾರತೀಯರಿದ್ದ ನೌಕೆಯ ಮೇಲೆ ಕ್ಷಿಪಣಿ ದಾಳಿ

  • 24 ರ ಪೈಕಿ 21 ಭಾರತೀಯರ ಸುರಕ್ಷಿತ ರಕ್ಷಣೆ

  • ದಿಗ್ಬಂಧನವನ್ನು ಮುರಿದಿದ್ದರಿಂದ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ದಾವೆ

  • ಭಾರತದಿಂದ ತೀವ್ರ ಪದಗಳಲ್ಲಿ ಖಂಡನೆ

ಮಸ್ಕತ್ (ಓಮನ್) – ಅಮೆರಿಕದ ನೌಕಾಪಡೆಯು ಓಮನ್ ಸಮುದ್ರದಲ್ಲಿ ‘ಸೆಟೆಬೆಲೊ’ ಎಂಬ ತೈಲವಾಹಕ ನೌಕೆಯ ಮೇಲೆ ಕ್ಷಿಪಣಿ ಮೂಲಕ ನಡೆಸಿದ ದಾಳಿಯಲ್ಲಿ ಆದಿತ್ಯ ಶರ್ಮಾ, ಶಿವಾನಂದ್ ಚೌರಸಿಯಾ ಮತ್ತು ಸುರೇಶ್ ಎಂಬ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ. ‘ಫಾರ್ವರ್ಡ್ ಸೀಮೆನ್ಸ್‌ ಯೂನಿಯನ್ ಆಫ್ ಇಂಡಿಯಾ’ದ ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ಅವರು ದಾಳಿ ನಡೆದಿರುವ ಸುದ್ದಿಯನ್ನು ಖಚಿತಪಡಿಸಿದ್ದಾರೆ.

24 ಗಂಟೆಗಳಲ್ಲಿ ಎರಡನೇ ದಾಳಿ : 24 ಭಾರತೀಯ ‘ಕ್ರೂ ಮೆಂಬರ್ಸ್’ (ನೌಕೆಯಲ್ಲಿದ್ದ ಸಹಾಯಕ ಸಿಬ್ಬಂದಿ) ಪ್ರಯಾಣಿಸುತ್ತಿದ್ದರು!

‘ಸೆಟೆಬೆಲೊ’ ನೌಕೆಯಲ್ಲಿ ಒಟ್ಟು 28 ಸಿಬ್ಬಂದಿ ಇದ್ದರು. ಇವರಲ್ಲಿ 24 ಭಾರತೀಯರು, 2 ಪಾಕಿಸ್ತಾನಿ, 1 ರಷ್ಯನ್ ಮತ್ತು 1 ಯುಕ್ರೇನ್ ಪ್ರಜೆ ಸೇರಿದ್ದರು. ಈ ನೌಕೆಯು ಚೀನಾದ ಲಿಯಾನ್‌ಯುಂಗಾಂಗ್ ಬಂದರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಫುಜೈರಾದತ್ತ ಹೋಗುತ್ತಿತ್ತು. ಅಮೆರಿಕವು ನೌಕೆಯ ಮೇಲೆ ಕ್ಷಿಪಣಿ ಉಡಾಯಿಸಿದ ನಂತರ ನೌಕೆಯ ‘ಎಂಜಿನ್ ರೂಮ್‌’ನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತು. ಇದರ ನಂತರ ಓಮನ್‌ನ ಸಶಸ್ತ್ರ ಪಡೆಗಳು ಮತ್ತು ನೌಕಾಪಡೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ 21 ಭಾರತೀಯರನ್ನು ಸುರಕ್ಷಿತವಾಗಿ ಹೊರಗೆ ಕರೆತಂದವು. ಕಳೆದ 24 ಗಂಟೆಗಳಲ್ಲಿ ಭಾರತೀಯ ‘ಕ್ರೂ ಮೆಂಬರ್ಸ್’ ಇದ್ದ ನೌಕೆಯ ಮೇಲೆ ಅಮೆರಿಕ ನೌಕಾಪಡೆಯು ನಡೆಸಿದ ಸತತ ಎರಡನೇ ದೊಡ್ಡ ದಾಳಿ ಇದಾಗಿದೆ.

ಅಮೆರಿಕದ ದಿಗ್ಬಂಧನವನ್ನು ಮುರಿದಿದ್ದರಿಂದ ದಾಳಿ(ಯಂತೆ)! – ಅಮೆರಿಕ

ಅಮೆರಿಕವು ಈ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ, ಏಪ್ರಿಲ್ 13 ರಿಂದ ಅಮೆರಿಕವು ಇರಾನ್ ಬಂದರುಗಳನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿದೆ ಎಂದು ಹೇಳಿದೆ. ‘ಸೆಟೆಬೆಲೊ’ ನೌಕೆಯು ಅಮೆರಿಕ ನೌಕಾಪಡೆಯು ನೀಡಿದ ಎಚ್ಚರಿಕೆ ಮತ್ತು ಸೂಚನೆಗಳನ್ನು ಪದೇ ಪದೇ ಉಲ್ಲಂಘಿಸಿದೆ. ಈ ನೌಕೆಯು ಅಮೆರಿಕದ ದಿಗ್ಬಂಧನವನ್ನು ಮುರಿದಿದ್ದರಿಂದ ಅದರ ಮೇಲೆ ದಾಳಿ ನಡೆಸಲಾಗಿದೆ.

ಭಾರತದಿಂದ ಅಮೆರಿಕ ರಾಯಭಾರಿಗೆ ಸಮನ್ಸ್: ತೀವ್ರ ಖಂಡನೆ ವ್ಯಕ್ತ!

ಅಮೆರಿಕದ ಕ್ರಮದಿಂದಾಗಿ ಭಾರತ ಮತ್ತು ಅಮೆರಿಕ ಎಂಬ ಈ ಎರಡು ಮಿತ್ರ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ. ಈ ಘಟನೆಯ ನಂತರ ಭಾರತದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಾಗರಾಜ ನಾಯ್ಡು ಅವರು ಅಮೆರಿಕದ ಉಸ್ತುವಾರಿ (ತಾತ್ಕಾಲಿಕ ಜವಾಬ್ದಾರಿ ಹೊಂದಿರುವ) ರಾಯಭಾರಿ ಜೇಸನ್ ಮೀಕ್ಸ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿಕೊಂಡು ಅಮೆರಿಕದ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದರು.

ಭಾರತೀಯ ನಾವಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ಅಮೆರಿಕದ ಯಾವುದೇ ಮಿಲಿಟರಿ ಕ್ರಮವನ್ನು ಸಹಿಸುವುದಿಲ್ಲ ಎಂದು ಭಾರತ ಎಚ್ಚರಿಸಿದೆ. ಅಮೆರಿಕವು ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ನೌಕೆಗಳನ್ನು ಗುರಿಯಾಗಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದಕ್ಕೆ ಅಮೆರಿಕ ಸರಕಾರವು ನಾವು ಈ ವಿಷಯದಲ್ಲಿ ಭಾರತ ಸರಕಾರದೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಪರಿಸ್ಥಿತಿಯ ಮೇಲೆ ಭಾರತದ ನಿಗಾ! – ವಿದೇಶಾಂಗ ಸಚಿವಾಲಯ

ಭಾರತೀಯ ವಿದೇಶಾಂಗ ಸಚಿವಾಲಯವು, ಭಾರತೀಯ ರಾಯಭಾರ ಕಚೇರಿಯು ಸಂಪೂರ್ಣ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದು ಹೇಳಿದೆ. ಓಮನ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಸಹಕರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ನೌಕೆಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳು ಅತ್ಯಂತ ಕಳವಳಕಾರಿಯಾಗಿವೆ. ನಾವು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡಲು ಮತ್ತು ರಾಜತಾಂತ್ರಿಕ ಪರಿಹಾರಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು ಪೂರ್ಣಗೊಳಿಸಲು ಮತ್ತೊಮ್ಮೆ ಕರೆ ನೀಡುತ್ತಿದ್ದೇವೆ. ಈ ಉದ್ವಿಗ್ನತೆ ಕಡಿಮೆಯಾದರೆ ಈ ಪ್ರದೇಶಕ್ಕೆ ಮತ್ತೆ ಶಾಂತಿ ಮತ್ತು ಸ್ಥಿರತೆ ಮರಳಬಹುದು.

ಓಮನ್ ತೀರದ ಹತ್ತಿರ ಮತ್ತೊಂದು ಹಡಗಿನ ಮೇಲೆ ದಾಳಿ

ಓಮನ್ ತೀರದ ಹತ್ತಿರ ‘ಎಂ.ಟಿ. ಜಲವೀರ್’ ಎಂಬ ನೌಕೆಯ ಮೇಲೂ ದಾಳಿ ನಡೆದಿದೆ. ಈ ನೌಕೆಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಭಾರಿ ಪ್ರಮಾಣದಲ್ಲಿ ಪ್ರಸಾರವಾಗಿದೆ. ಆದಾಗ್ಯೂ ಈ ಘಟನೆಯ ವಿವರಗಳು ಇನ್ನೂ ಹೊರಬಂದಿಲ್ಲ. ಇಲ್ಲಿನ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ಅಮೆರಿಕದ ದಾದಾಗಿರಿಯನ್ನು ಕೇವಲ ಶಾಬ್ದಿಕವಾಗಿ ಖಂಡಿಸಿ ಸುಮ್ಮನಾಗಬಾರದು, ಬದಲಿಗೆ ಅದಕ್ಕೆ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸಬೇಕು!