ಎನ್.ಐ.ಎ. ಕೂಡ ಭುವನೇಶ್ವರ ಸ್ಫೋಟದ ತನಿಖೆ ನಡೆಸಲಿದೆ!

​ಭುವನೇಶ್ವರ (ಒಡಿಶಾ) – ಕಳೆದ ತಿಂಗಳು ಜನವರಿ ೨೭ ರಂದು ಇಲ್ಲಿನ ಸುಂದರಪದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸ್ಫೋಟದ ತನಿಖೆಯನ್ನು ಇದುವರೆ ಕೇವಲ ಒಡಿಶಾ ಪೊಲೀಸರು ಮಾತ್ರ ಮಾಡುತ್ತಿದ್ದರು; ಆದರೆ ಈಗ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನೂ (ಎನ್.ಐ.ಎ.) ಕರೆಯಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಸಿಕ್ಕಿರುವ ಹೊಸ ಸಿಸಿಟಿವಿ ವಿಡಿಯೋದಿಂದ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಇದರಲ್ಲಿ ಸ್ಫೋಟದ ತೀವ್ರತೆ ಮತ್ತು ಅದರ ನಂತರದ ಗೊಂದಲದ ಸ್ಥಿತಿ ಸ್ಪಷ್ಟವಾಗಿ ಕಾಣುತ್ತಿದೆ. ತಜ್ಞರ ಪ್ರಕಾರ, ಈ ವಿಡಿಯೋದಿಂದ ಸ್ಫೋಟದ ಸ್ವರೂಪ ಸ್ಪಷ್ಟವಾಗಲಿದೆ, ಹಾಗೂ ಇದರ ಹಿಂದೆ ದೊಡ್ಡ ಸಂಚು ಇತ್ತೇ, ಎಂಬುದು ಕೂಡ ಬಯಲಾಗಬಹುದು.

​ಗಾಯಗೊಂಡ ನಾಲ್ವರಲ್ಲಿ ಒಬ್ಬನು ಪಳಗಿದ ಅಪರಾಧಿಯಾಗಿದ್ದನು. ಅಪರಾಧಿಗಳ ಕೈಗೆ ಇಷ್ಟು ಶಕ್ತಿಯುತ ಸ್ಫೋಟಕ ವಸ್ತು ಹೇಗೆ ತಲುಪಿತು, ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ವಿಶೇಷ ತನಿಖೆ ನಡೆಸುತ್ತಿದೆ. ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಜಂಟಿ ಕಾರ್ಯಾಚರಣೆಯು, ಈ ಘಟನೆಯ ಸಂಬಂಧ ಕೇವಲ ಸ್ಥಳೀಯ ಅಪರಾಧಕ್ಕೆ ಸೀಮಿತವಾಗಿರದೆ ಸುರಕ್ಷತೆಗೆ ಸಂಬಂಧಿಸಿದ ದೊಡ್ಡ ಸವಾಲಾಗಿರಬಹುದು, ಎಂಬ ಸಂಕೇತವನ್ನು ನೀಡುತ್ತಿದೆ.