ವೈಮಾನಿಕನು(ಪೈಲಟ್) ಇಂಧನದ ಸ್ವಿಚ್ ಅನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದರಿಂದ ಅಪಘಾತ ಸಂಭವಿಸಿದೆ – ಇಟಲಿಯ ವಾರ್ತಾ ಪತ್ರಿಕೆಯ ದಾವೆ – Ahmedabad Air India Accident Report

ಕರ್ಣಾವತಿ (ಗುಜರಾತ) ಇಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ


ನವ ದೆಹಲಿ – ಕಳೆದ ವರ್ಷ ಜೂನ್ ತಿಂಗಳಲ್ಲಿ ಕರ್ಣಾವತಿಯಲ್ಲಿ ನಡೆದ ಏರ್ ಇಂಡಿಯಾದ ವಿಮಾನದ ಅಪಘಾತದಲ್ಲಿ ೨೪೧ ಪ್ರಯಾಣಿಕರ ಸಹಿತ ಒಟ್ಟು ೨೭೪ ಜನರ ಸಾವು ಸಂಭವಿಸಿತ್ತು. ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿಯೇ ಈ ವಿಮಾನ ಪತನಗೊಂಡಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಈಗ ಇಟಲಿಯ ‘ಕೋರಿಯರೇ ಡೆಲಾ ಸೇರಾ’ ಎಂಬ ವಾರ್ತಾಪತ್ರಿಕೆಯು, ‘ಈ ಅಪಘಾತವಾದಾಗ, ಕಾಕ್‌ ಪಿಟ್‌ ನಲ್ಲಿ (ವೈಮಾನಿಕನ ಕೋಣೆಯಲ್ಲಿ) ಇದ್ದ ಒಬ್ಬ ವೈಮಾನಿಕನು ಇಂಧನದ ಸ್ವಿಚ್ ಅನ್ನು ಬೇಕಂತಲೇ (ಉದ್ದೇಶಪೂರ್ವಕವಾಗಿ) ಬಂದ್ ಮಾಡಿದ್ದನು’, ಎಂದು ಭಾರತೀಯ ತನಿಖಾ ದಳವು ತನ್ನ ಕೊನೆಯ ವರದಿಯಲ್ಲಿ ಹೇಳಬಹುದು’, ಎಂದು ಹೇಳಿದೆ.

೧. ಈ ವಾರ್ತಾಪತ್ರಿಕೆಯು ಮುಂದೆ, ಇಲ್ಲಿಯವರೆಗಿನ ತನಿಖೆಯಲ್ಲಿ ವಿಮಾನದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಕಂಡುಬಂದಿಲ್ಲ, ಎಂದು ಹೇಳಿದೆ. ಹಾಗೆಯೇ ಕಾಕ್‌ ಪಿಟ್ ವಾಯ್ಸ್ ರೆಕಾರ್ಡಿಂಗ್ ಮೂಲಕ ಇಬ್ಬರಲ್ಲಿ ಒಬ್ಬ ವೈಮಾನಿಕನು ಇಂಧನದ ಸ್ವಿಚ್ ಬಂದ್ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಹೇಳಿದೆ.

೨. ಈ ಅಪಘಾತದ ಹೊಣೆಯನ್ನು ಮೃತ ಕ್ಯಾಪ್ಟನ್ ಸುಮಿತ್ ಸಭರವಾಲ್ ಇವರ ಮೇಲೆ ಹಾಕುವ ಸಾಧ್ಯತೆಯಿದೆ, ಎಂದು ಈ ವಾರ್ತಾಪತ್ರಿಕೆಯು ಪಾಶ್ಚಿಮಾತ್ಯ ಮೂಲಗಳ ಉಲ್ಲೇಖ ನೀಡಿ ತನ್ನ ವರದಿಯಲ್ಲಿ ಹೇಳಿದೆ. ಇದಕ್ಕೂ ಮೊದಲು ಕ್ಯಾಪ್ಟನ್ ಸಭರವಾಲ್ ಈ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ತನಿಖಾ ದಳಗಳು ಹೇಳಿರುವುದು ಬೆಳಕಿಗೆ ಬಂದಿತ್ತು. ಅದನ್ನು ವೈಮಾನಿಕರ ಸಂಘಟನೆಯು ವಿರೋಧಿಸಿತ್ತು.

೩. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಅಂದರೆ ‘ಬ್ಲ್ಯಾಕ್ ಬಾಕ್ಸ್’ನಲ್ಲಿನ ದಾಖಲೆಗಳಿಂದಲೂ ಸಂಶಯದ ಮುಳ್ಳು ಕ್ಯಾಪ್ಟನ್ ಸುಮಿತ್ ಸಭರವಾಲ್ ಇವರ ಕಡೆಗೆ ತಿರುಗಿದೆ. ಬ್ಲ್ಯಾಕ್ ಬಾಕ್ಸನ ರೆಕಾರ್ಡಿಂಗ್‌ ನಲ್ಲಿ ‘ನೀವು ಎಂಜಿನ್ ಏಕೆ ಸ್ಥಗಿತಗೊಳಿಸಿದ್ದೀರಿ ?’ ಎಂದು ಒಬ್ಬ ವೈಮಾನಿಕನು ಇನ್ನೊಬ್ಬ ವೈಮಾನಿಕನಿಗೆ ಕೇಳುತ್ತಿರುವುದು ಕೇಳಿಸುತ್ತಿದೆ. ಅದಕ್ಕೆ ಉತ್ತರಿಸುವಾಗ ಇನ್ನೊಬ್ಬ ವೈಮಾನಿಕನು ನಾನು ಎಂಜಿನ್ ಸ್ಥಗಿತಗೊಳಿಸಿಲ್ಲ, ಎಂದು ಹೇಳುತ್ತಿರುವುದು ದಾಖಲಾಗಿದೆ, ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

೪. ಭಾರತದಲ್ಲಿ ಯಾವುದೇ ದೊಡ್ಡ ವಿವಾದ ನಿರ್ಮಾಣವಾಗಬಾರದು; ಎಂದು ಈ ಅಪಘಾತದ ಅಂತಿಮ ವರದಿಯನ್ನು ಸ್ವಲ್ಪ ಸೌಮ್ಯ ಶಬ್ದಗಳಲ್ಲಿ ಬರೆಯುವ ಸಾಧ್ಯತೆಯಿದೆಯೆಂದೂ ಈ ವಾರ್ತಾಪತ್ರಿಕೆ ಹೇಳಿಕೆ ನೀಡಿದೆ.

ಸಂಪಾದಕೀಯ ನಿಲುವು

ಅಪಘಾತವಾದಾಗಿನಿಂದ ಮೃತ ವೈಮಾನಿಕನ ಮೇಲೆ ಅಪಘಾತದ ಹೊಣೆ ಹೊರಿಸುವ ಪ್ರಯತ್ನವಾಗುತ್ತಿದೆ. ಇದರಿಂದ ವಿಷಯವನ್ನು ಮುಚ್ಚಿಡುವುದರೊಂದಿಗೆ ಯಾರನ್ನಾದರೂ ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆಯೇ ? ಎಂಬ ಸಂಶಯ ಮೂಡುತ್ತಿದೆ !