ಆಗ್ರಾದಲ್ಲಿ ದೇವಸ್ಥಾನದ ಗಂಟೆಗಳನ್ನು ಕದಿಯುತ್ತಿದ್ದ ಗ್ಯಾಂಗ್‌ನ ಇಬ್ಬರ ಬಂಧನ: ೩೧ ಹಿತ್ತಾಳೆ ಗಂಟೆಗಳು ಜಪ್ತಿ

ಆಗ್ರಾ (ಉತ್ತರ ಪ್ರದೇಶ) – ಆಗ್ರಾ ಜಿಲ್ಲೆಯ ದೇವಾಲಯಗಳನ್ನು ಸತತವಾಗಿ ಗುರಿ ಮಾಡುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್‌ನ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಕಳವು ಮಾಡಿದ ಗಂಟೆಗಳು, ಕೃತ್ಯಕ್ಕೆ ಬಳಸುತ್ತಿದ್ದ ಆಯುಧಗಳು ಮತ್ತು ಒಂದು ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

ಜನವರಿ ೨೭ ರ ರಾತ್ರಿ ಸಂದೇಹಾಸ್ಪದ ವಾಹನಗಳನ್ನು ತಪಾಸಣೆ ಮಾಡುವಾಗ ಪೊಲೀಸರು ಒಂದು ರಿಕ್ಷಾವನ್ನು ತಡೆದದರು. ಅದರ ಶೋಧ ನಡೆಸಿದಾಗ ಅದರಲ್ಲಿ ೩೧ ಹಿತ್ತಾಳೆ ಗಂಟೆಗಳು, ಗರಗಸ ಮತ್ತು ಕಟಾವಿನಂತಹ ಆಯುಧಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶೈಲೇಂದ್ರ ಮತ್ತು ಮನೋಜ್ ಎಂಬುವವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಗ್ಯಾಂಗ್‌ನ ಇತರ ಇಬ್ಬರು ಸಹಚರರಾದ ರಾಜೇಶ ಮತ್ತು ನಾಹರ ಸಿಂಗ್ ಸದ್ಯ ಪರಾರಿಯಾಗಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.