‘ಡಿ.ಆರ್.ಡಿ.ಒ’ದ ‘ಬ್ರಹ್ಮೋಸ್’ ಕ್ಷಿಪಣಿ ಯೋಜನೆಯ ಎಂಜಿನಿಯರ್‌ ನ ಅನುಮಾನಾಸ್ಪದ ಸಾವು : DRDO Engineer Death

(‘ಡಿ.ಆರ್.ಡಿ.ಒ’ ಎಂದರೆ ‘ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್’ – ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)

ಆಕಾಶದೀಪ್ ಗುಪ್ತಾ, ಡಿಆರ್‌ಡಿಒ ಎಂಜಿನಿಯರ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಲಕ್ಷ್ಮಣಪುರಿ ನಗರದ ಆಲಮಬಾಗ್ ಪ್ರದೇಶದ ಓಮ್ ನಗರದಲ್ಲಿ ವಾಸವಾಗಿದ್ದ ‘ಡಿ.ಆರ್.ಡಿ.ಒ’ದ ಎಂಜಿನಿಯರ್ ಆಕಾಶದೀಪ ಗುಪ್ತಾ (ವಯಸ್ಸು 30 ವರ್ಷ) ಅವರ ಸಂದೇಹಾಸ್ಪದ ಸಾವು ಸಂಭವಿಸಿದೆ. ಆಕಾಶದೀಪ ಗುಪ್ತಾ ಅವರು ದೆಹಲಿಯಲ್ಲಿ ‘ಬ್ರಹ್ಮೋಸ್’ ಕ್ಷಿಪಣಿ ಯೋಜನೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ದೀಪಾವಳಿ ರಜೆಗಾಗಿ ತಮ್ಮ ಕುಟುಂಬದೊಂದಿಗೆ ಇರಲು ಬಂದಿದ್ದರು. ಆಕಾಶ ಅವರು ಕಳೆದ 3 ವರ್ಷಗಳಿಂದ ರಕ್ಷಣಾ ಸಂಬಂಧಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ 7 ವರ್ಷಗಳಿಂದ ‘ಬ್ರಹ್ಮೋಸ್’ ಕ್ಷಿಪಣಿ ಯೋಜನೆಯಲ್ಲಿ ಭಾಗಿಯಾಗಿದ್ದಾರೆ.

ಅಕ್ಟೋಬರ್ 21 ರ ರಾತ್ರಿ ವಾಲಿಬಾಲ್ ಆಡಿ ಬಂದ ನಂತರ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಕುಟುಂಬದವರು ತಕ್ಷಣ ಅವರನ್ನು ಲೋಕಬಂಧು ಆಸ್ಪತ್ರೆಗೆ ಕರೆದೊಯ್ದರು; ಆದರೆ ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ; ಆದರೆ ಪೊಲೀಸ್ ಪೋಸ್ಟ್‌ಮಾರ್ಟಮ್ ವರದಿಗಾಗಿ ಕಾಯುತ್ತಿದ್ದಾರೆ.

ಕುಟುಂಬದವರ ಹೇಳಿಕೆಯ ಪ್ರಕಾರ, ಆಕಾಶದೀಪ ಅವರ ವಿವಾಹ ಕೇವಲ 6 ತಿಂಗಳ ಹಿಂದೆ ನಡೆದಿತ್ತು. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಅವರಿಗೆ ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ಇತ್ತು. ಅಕ್ಟೋಬರ್ 21 ರಂದು ಅವರು ವಾಲಿಬಾಲ್ ಆಡಿ ಹಿಂದಿರುಗಿದ್ದರು. ಅವರ ಆಕಸ್ಮಿಕ ಸಾವು ಎಲ್ಲರಿಗೂ ಆಘಾತಕಾರಿ ವಿಷಯವಾಗಿದೆ, ಎಂದು ಹೇಳಿದರು.