ಆಷಾಢ ಏಕಾದಶಿಯ ಪ್ರಯುಕ್ತ ಶ್ರೀ ವಿಠ್ಠಲ ರುಕ್ಮಿಣಿಯ ಮಹಾಪೂಜೆ ನಡೆಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡಣವಿಸ್!

ಮಹಾರಾಷ್ಟ್ರದ ಸಂಕಷ್ಟಗಳನ್ನು ದೂರಮಾಡಿ, ಎಲ್ಲರಿಗೂ ಸನ್ಮಾರ್ಗದಲ್ಲಿ ಬದುಕಲು ಸದ್ಬುದ್ಧಿಯನ್ನು ನೀಡು! – ಮುಖ್ಯಮಂತ್ರಿ ಫಡಣವಿಸ್

ಆಷಾಢ ಏಕಾದಶಿಯ ಪ್ರಯುಕ್ತ ಸರಕಾರದಿಂದ ಶ್ರೀ ವಿಠ್ಠಲ-ರುಕ್ಮಿಣಿಯ ಮಹಾಪೂಜೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ಸೌ. ಅಮೃತ ಫಡಣವಿಸ ಮತ್ತು ಇತರರು

ಪಂಢರಪುರ (ಸೋಲಾಪುರ ಜಿಲ್ಲೆ) – ಪಾಂಡುರಂಗನು ರಾಜ್ಯದ ಸಂಕಷ್ಟಗಳನ್ನು ದೂರ ಮಾಡುವ ಶಕ್ತಿಯನ್ನು ನೀಡಲಿ, ಸನ್ಮಾರ್ಗದಲ್ಲಿ ನಡೆಯಲು ಸದ್ಬುದ್ಧಿಯನ್ನು ನೀಡಲಿ, ರೈತರನ್ನು ಸುಖ-ಸಂತೋಷಗೊಳಿಸಲು ಆಶೀರ್ವದಿಸಲಿ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಪ್ರಾರ್ಥಿಸಿದರು. ಆಷಾಢ ಏಕಾದಶಿಯ ಸಂದರ್ಭದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿಯ ಸರಕಾರಿ ಮಹಾಪೂಜೆಯನ್ನು ಮುಖ್ಯಮಂತ್ರಿ ಫಡಣವಿಸ್ ತಮ್ಮ ಪತ್ನಿಯೊಂದಿಗೆ, ಹಾಗೂ ಮಾನ್ಯ ವಾರಕರಿಗಳಾದ ಶ್ರೀ ಕೈಲಾಸ್ ಮತ್ತು ಶ್ರೀಮತಿ ಕಲ್ಪನಾ ಕೈಲಾಸ್ ಉಗಲೆ ಅವರೊಂದಿಗೆ ನೆರವೇರಿಸಿದರು. ನಂತರ ‘ಶ್ರೀ ವಿಠ್ಠಲ-ರುಕ್ಮಿಣಿ ಮಂದಿರ ಸಮಿತಿ’ಯ ವತಿಯಿಂದ ಮುಖ್ಯಮಂತ್ರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ಸೋಲಾಪುರ ಜಿಲ್ಲೆಯ ಪಾಲಕ ಸಚಿವರಾದ ಜಯಕುಮಾರ್ ಗೋರೆ, ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್, ಶ್ರೀಮತಿ ಅಮೃತಾ ಫಡಣವಿಸ್, ಬಿಜೆಪಿ ಶಾಸಕ ಸಮಾಧಾನ ಅವತಾರೆ, ಜಿಲ್ಲಾಧಿಕಾರಿ ಕುಮಾರ್ ಆಶೀರ್ವಾದ್, ಮಂದಿರ ಸಮಿತಿಯ ಸಹ-ಅಧ್ಯಕ್ಷ ಹ.ಭ.ಪ. ಗಹಿನಿನಾಥ್ ಮಹಾರಾಜ್ ಔಸೇಕರ್ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಮಂಡಿಸಿದ ಪ್ರಮುಖ ಅಂಶಗಳು!

೧. ವಾರಿಯ (ಪಾದಯಾತ್ರೆ) ಸಂಪ್ರದಾಯವು ನಿರಂತರವಾಗಿ ಬೆಳೆಯುತ್ತಿದೆ ಮತ್ತು ಈ ವರ್ಷ ವಾರಿಯು ಹೊಸ ದಾಖಲೆಯನ್ನು ನಿರ್ಮಿಸಿದೆ. ಹೆಚ್ಚಿನ ಸಂಖ್ಯೆಯ ವಾರಕರಿಗಳು ಪಾಂಡುರಂಗನ ದರ್ಶನಕ್ಕಾಗಿ ಪಾದಯಾತ್ರೆ ಮಾಡುತ್ತಾ ಇಲ್ಲಿಗೆ ಬಂದಿದ್ದಾರೆ. ವಿಶೇಷವಾಗಿ, ಈ ವಾರಕರಿಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ.

೨. ಸರಕಾರ ಮತ್ತು ಆಡಳಿತವು ವಾರಕರಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿವೆ. ಆಡಳಿತವು ‘ಜರ್ಮನ್ ಹ್ಯಾಂಗರ್’ಗಳನ್ನು ಸಿದ್ಧಪಡಿಸಿದ್ದರಿಂದ ವಾರಕರಿಗಳಿಗೆ ಉತ್ತಮ ವ್ಯವಸ್ಥೆಯಾಗಿದೆ.

೩. ವಾರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇತರರಲ್ಲಿ ಪಾಂಡುರಂಗನನ್ನು ನೋಡುತ್ತಾನೆ, ಈ ಪದ್ಧತಿಯು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ವಾರಿಯಲ್ಲಿ ಹರಿನಾಮವನ್ನು ಹೇಳುವಾಗ ಹೊಸ ಶಕ್ತಿ ಸಿಗುತ್ತದೆ. ವಾರಿಯು ನಿಜವಾದ ಅರ್ಥದಲ್ಲಿ ಭಾಗವತ ಧರ್ಮದ ಧ್ವಜವನ್ನು ಎತ್ತಿಹಿಡಿದಿದೆ.

ಮಂದಿರ ಸಮಿತಿಯ ಸಹ-ಅಧ್ಯಕ್ಷ ಹ.ಭ.ಪ. ಗಹಿನಿನಾಥ್ ಮಹಾರಾಜ್ ಔಸೇಕರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಾಪೂಜೆಯ ನಂತರ ಮುಖ್ಯಮಂತ್ರಿಗಳ ಹಸ್ತದಿಂದ ಮಾನ್ಯ ವಾರಕರಿಗಳನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು. ಇದರೊಂದಿಗೆ, ಮುಖ್ಯಮಂತ್ರಿಗಳಿಂದ ಸ್ವಚ್ಛತೆ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಪಾದಯಾತ್ರೆ ಮೂಲಕ ಪ್ರಬೋಧನೆ ಮಾಡುವ ದಿಂಡಿಗಳಿಗೆ ‘ಶ್ರೀ ವಿಠ್ಠಲ ನಿರ್ಮಲ್ ದಿಂಡಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.