Bangladeshi Infiltrators Arrested : ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ 1 ಸಾವಿರದ 200ಕ್ಕೂ ಹೆಚ್ಚು ನುಸುಳುಕೋರರ ಬಂಧನ

ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲಾಗುವುದು

ಜೈಪುರ (ರಾಜಸ್ಥಾನ) – ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರ ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಏಪ್ರಿಲ್ 30, 2025ರಿಂದ ರಾಜಸ್ಥಾನದಲ್ಲಿ ಪ್ರಾರಂಭವಾದ ವಿಶೇಷ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 1 ಸಾವಿರಕ್ಕೂ ಹೆಚ್ಚು ನುಸುಳುಕೋರರನ್ನು ಬಂಧಿಸಲಾಗಿದೆ. ಹಾಗೆಯೇ ಹರಿಯಾಣದ 3 ಜಿಲ್ಲೆಗಳಲ್ಲಿ 237 ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಹಲವರು ನಕಲಿ ದಾಖಲೆಗಳ ಆಧಾರದ ಮೇಲೆ ತಮ್ಮನ್ನು ಭಾರತೀಯ ಪ್ರಜೆಗಳು ಎಂದು ಘೋಷಿಸಿಕೊಳ್ಳಲು ಪ್ರಯತ್ನಿಸಿದ್ದರು. ಈಗ ನುಸುಳುಕೋರರನ್ನು ವಿಶೇಷ ವಿಮಾನಗಳಲ್ಲಿ ಬಂಗಾಳಕ್ಕೆ ಕಳುಹಿಸಲಾಗುತ್ತಿದೆ, ಅಲ್ಲಿಂದ ಗಡಿ ಭದ್ರತಾ ಪಡೆ ಅವರನ್ನು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳಿಗೆ ಹಿಂದಿರುಗಿಸಲಿದೆ.

ನಕಲಿ ದಾಖಲೆಗಳ ಮೂಲಕ ವಾಸ

ತನಿಖೆಯಲ್ಲಿ ಕಂಡುಬಂದಂತೆ, ಈ ಜನರು ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ನಿವಾಸ ಪ್ರಮಾಣಪತ್ರಗಳನ್ನು ತಯಾರಿಸಿ ತಾವು ರಾಜಸ್ಥಾನದ ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುತ್ತಿದ್ದರು. ಅನೇಕ ಮಹಿಳೆಯರು ಮನೆ ಕೆಲಸದವರಾಗಿ ಕೆಲಸ ಮಾಡುತ್ತಿದ್ದರು, ಪುರುಷರು ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವುದು, ಗಣಿಗಾರಿಕೆ ಮಾಡುವುದು ಮುಂತಾದ ವೃತ್ತಿಗಳಲ್ಲಿ ತೊಡಗಿಕೊಂಡಿದ್ದರು. ಕೆಲವರ ವಿರುದ್ಧ ಕಳ್ಳತನ ಮತ್ತು ಇತರ ಅಪರಾಧಗಳೂ ದಾಖಲಾಗಿವೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ಮತ್ತು ತಾತ್ಕಾಲಿಕ ನಿವಾಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ನುಸುಳುಕೋರರನ್ನು ತಾತ್ಕಾಲಿಕವಾಗಿ ಇರಿಸಲಾಗುತ್ತಿದೆ. ಮೇ 15ರಂದು 148 ಜನರ ಮೊದಲ ತಂಡವನ್ನು ವಿಶೇಷ ವಿಮಾನದಲ್ಲಿ ಬಂಗಾಳಕ್ಕೆ ಕಳುಹಿಸಲಾಯಿತು. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ಕಳುಹಿಸಲು ಯೋಜಿಸಲಾಗಿದೆ. ಹರಿಯಾಣದಲ್ಲಿಯೂ ಈ ನುಸುಳುಕೋರರು ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದರು. ದಾಖಲೆಗಳನ್ನು ಪರಿಶೀಲಿಸದೆ ಅಕ್ರಮ ಕಾರ್ಮಿಕರನ್ನು ಕೆಲಸಕ್ಕೆ ಇರಿಸಿಕೊಂಡ ಮಾಲೀಕರ ವಿರುದ್ಧವೂ ಪೊಲೀಸರು ಈಗ ಕ್ರಮ ಕೈಗೊಳ್ಳಲು ಯೋಜಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿರುವ ಪ್ರಮಾಣಕ್ಕೆ ಹೋಲಿಸಿದರೆ, ಅವರನ್ನು ಹಿಡಿದು ಹೊರಗೆ ಕಳುಹಿಸುವ ಕಾರ್ಯಾಚರಣೆ ಅತಿ ವೇಗವಾಗಿ ಆಗಬೇಕು ಎಂಬುದು ಜನರ ಇಚ್ಛೆಯಾಗಿದೆ!