
ಫೊಂಡಾ, ಮೇ ೧೫ (ವಾರ್ತೆ.) – ಫರ್ಮಾಗುಡಿಯ ಗೋವಾ ಇಂಜಿನಿಯರಿಂಗ್ ಕಾಲೇಜಿನ ‘ಇನ್ಫಿನಿಟಿ ಮೈದಾನ’ದಲ್ಲಿ ಮೇ ೧೭ ರಿಂದ ೧೯, ೨೦೨೫ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಮೇ ೧೬ ರಂದು ಮಹೋತ್ಸವದ ಸ್ಥಳದಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಳೆ ನಗರಿ’ಯ ಉದ್ಘಾಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ ೧೫ ರಂದು ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತದ ವತಿಯಿಂದ ಮಹೋತ್ಸವದ ಸ್ಥಳವನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಇಗ್ನಾ ಕ್ಲಿಟ್ಸ್ ಮತ್ತು ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ಟೀಕಮ್ ಸಿಂಗ್ ವರ್ಮಾ ಅವರೊಂದಿಗೆ ಇತರ ಪೊಲೀಸ್ ಅಧಿಕಾರಿಗಳು, ಆಡಳಿತ ಅಧಿಕಾರಿಗಳು, ಸನಾತನದ ಸಂತ ಪೂಜ್ಯ ಪೃಥ್ವಿರಾಜ್ ಹಜಾರೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಟೀಕಮ್ ಸಿಂಗ್ ವರ್ಮಾ ಮತ್ತು ಜಿಲ್ಲಾಧಿಕಾರಿ ಇಗ್ನಾ ಕ್ಲಿಟ್ಸ್ ಅವರು ಮಹೋತ್ಸವದ ಮೂರೂ ಭವ್ಯ ಮಂಟಪಗಳು, ಮುಖ್ಯ ದ್ವಾರ, ಮಹೋತ್ಸವದ ಸ್ಥಳದ ಭದ್ರತಾ ವ್ಯವಸ್ಥೆ, ಮುಖ್ಯ ಮಂಟಪದ ವೇದಿಕೆ, ಭೋಜನ ವ್ಯವಸ್ಥೆ, ಅತಿಗಣ್ಯ ವ್ಯಕ್ತಿಗಳ ಮಂಟಪ, ಸಾಧಕರು ಮತ್ತು ಧರ್ಮಪ್ರೇಮಿಗಳು ಉಪಸ್ಥಿತರಿರುವ ಮಂಟಪ ಮುಂತಾದ ಸ್ಥಳಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶ್ರೀ. ರಮೇಶ ಶಿಂದೆ ಅವರು ಮಹೋತ್ಸವದ ಸ್ಥಳದಲ್ಲಿರುವ ವಿವಿಧ ವ್ಯವಸ್ಥೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಟೀಕಮ್ ಸಿಂಗ್ ವರ್ಮಾ ಮತ್ತು ಇಗ್ನಾ ಕ್ಲಿಟ್ಸ್ ಅವರು ಈ ಸಂದರ್ಭದಲ್ಲಿ ಮಹೋತ್ಸವಕ್ಕೆ ಸಂಬಂಧಿಸಿದ ಹಲವು ಸೂಚನೆಗಳನ್ನು ನೀಡಿದರು. ಅವರು ಮಹೋತ್ಸವದ ಸ್ಥಳದಲ್ಲಿರುವ ವೈದ್ಯಕೀಯ ವ್ಯವಸ್ಥೆ, ಜನಸಂದಣಿ ನಿಯಂತ್ರಣ ನಿರ್ವಹಣೆ, ಬರುವವರ ಸುರಕ್ಷತೆ, ತುರ್ತು ಪರಿಸ್ಥಿತಿ ನಿರ್ವಹಣೆ, ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ಬರುವ-ಹೋಗುವ ದಾರಿಗಳ ಬಗ್ಗೆ ಆಳವಾದ ಮಾಹಿತಿಯನ್ನು ಪಡೆದುಕೊಂಡರು. ಈ ಸ್ಥಳದ ಕೆಲವು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ‘ಬಿವಿಜೆ ಇಂಡಿಯಾ’ ಸಂಸ್ಥೆಯ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅವರಿಗೂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಕೆಲವು ಸೂಚನೆಗಳನ್ನು ನೀಡಿದರು.