ಇದುವರೆಗೆ ವಿಶ್ವದ 50 ಪ್ರತಿಶತ ಹಿಂದೂಗಳು ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಿದ್ದಾರೆ !

ಮಹಾಕುಂಭ ಮೇಳದಲ್ಲಿ ಸ್ನಾನ ಮಾಡುವ ಭಕ್ತರ ಸಂಖ್ಯೆ 60 ಕೋಟಿಗೂ ಹೆಚ್ಚು !

ಪ್ರಯಾಗರಾಜ್‌ – ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಇಲ್ಲಿನ ಮಹಾಕುಂಭ ಮೇಳದಲ್ಲಿ ಇದುವರೆಗೆ 50 ಪ್ರತಿಶತ ಹಿಂದೂಗಳು ಸ್ನಾನ ಮಾಡಿದ್ದಾರೆ. ‘ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ’ ಮತ್ತು ‘ಪ್ಯೂ ರಿಸರ್ಚ್’ ಪ್ರಕಾರ ಭಾರತದ ಅಂದಾಜು ಜನಸಂಖ್ಯೆ 143 ಕೋಟಿ (1.43 ಶತಕೋಟಿ) ಇದೆ. ಇದರಲ್ಲಿ ಸನಾತನ ಧರ್ಮವನ್ನು ಪಾಲಿಸುವವರ ಸಂಖ್ಯೆ ಸುಮಾರು 110 ಕೋಟಿ (1.10 ಶತಕೋಟಿ) ಇದೆ. ಇದರೊಂದಿಗೆ ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪಾಲಿಸುವವರ ಒಟ್ಟು ಸಂಖ್ಯೆ 120 ಕೋಟಿ ಇದೆ. ಮಹಾಕುಂಭ ಮೇಳದಲ್ಲಿ ಸ್ನಾನ ಮಾಡುವ ಭಕ್ತರ ಸಂಖ್ಯೆಯನ್ನು ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪಾಲಿಸುವವರ ಸಂಖ್ಯೆಯೊಂದಿಗೆ ಹೋಲಿಸಿದರೆ, ಇದುವರೆಗೆ 50 ಪ್ರತಿಶತಕ್ಕಿಂತಲೂ ಹೆಚ್ಚು ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯೊಂದಿಗೆ ಸ್ನಾನಾರ್ಥಿಗಳ ಸಂಖ್ಯೆಯನ್ನು ಹೋಲಿಸಿದರೆ, ಈ ಪ್ರಮಾಣ 55 ಪ್ರತಿಶತದಷ್ಟಿದೆ, ಅಂದರೆ ದೇಶದ ಒಟ್ಟು ಜನಸಂಖ್ಯೆಯ 55 ಪ್ರತಿಶತಕ್ಕಿಂತಲೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಜನವರಿ 13 ರಿಂದ ಪ್ರಾರಂಭವಾದ ಮಹಾಕುಂಭ ಮೇಳದಲ್ಲಿ ಫೆಬ್ರವರಿ 22 ರವರೆಗೆ 60 ಕೋಟಿಗೂ ಹೆಚ್ಚು ಭಕ್ತರು ಸಂಗಮ ಸ್ನಾನ ಮಾಡಿದ್ದಾರೆ.

ಸರಕಾರವು ಸಂಪೂರ್ಣ ಮಹಾಕುಂಭ ಮೇಳದಲ್ಲಿ 40 ಕೋಟಿ ಭಕ್ತರು ಬರುವ ನಿರೀಕ್ಷೆ ಹೊಂದಿತ್ತು; ಆದರೆ ಸರಕಾರದ ಈ ಅಂದಾಜಿಗಿಂತ ಈ ಅಂಕಿಅಂಶವು ಬರೋಬ್ಬರಿ 20 ಕೋಟಿಗಳಷ್ಟು ಹೆಚ್ಚಾಗಿದೆ. ಇನ್ನೂ ಇಲ್ಲಿ ಪ್ರತಿದಿನ ಒಂದೂವರೆ ಕೋಟಿ ಭಕ್ತರು ಸ್ನಾನ ಮಾಡುತ್ತಿದ್ದಾರೆ. ಮಹಾಶಿವರಾತ್ರಿಯಂದು ಮಹಾಕುಂಭ ಮೇಳವು ಮುಕ್ತಾಯವಾಗಲಿದೆ. ಅಲ್ಲಿಯವರೆಗೆ ಭಕ್ತರು ಇಲ್ಲಿ ಪ್ರತಿದಿನ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ನಾನಕ್ಕೆ ಬರುತ್ತಾರೆ ಮತ್ತು ಮಹಾಶಿವರಾತ್ರಿಯ ದಿನದಂದು ಇರುವ ಮೇಳ ಸ್ನಾನದಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಸ್ನಾನಕ್ಕೆ ಬರುತ್ತಾರೆ ಎಂದು ಅಂದಾಜಿಸಲಾಗಿದೆ.