ಮಂಗಳೂರು – ವಾಯು ಸೇನೆಯ ತರಬೇತಿಯ ವೇಳೆ ಯೋಧ ಮಂಜುನಾಥ ಇವರು ವಿಮಾನದಿಂದ ಕೆಳಗೆ ಹಾರುವಾಗ ಪ್ಯಾರಾಚ್ಯೂಟ್ ತೆರೆಯದೇ ಇದ್ದರಿಂದ 1 ಸಾವಿರದ 500 ಅಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. 36 ವರ್ಷದ ಮಂಜುನಾಥ್ ಇವರು ಆಗ್ರಾದ ಪ್ಯಾರಾ ಟ್ರೈನಿಂಗ್ ಸ್ಕೂಲ್ನಲ್ಲಿ ವಾರೆಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನ್ಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದರು. ತರಬೇತಿಯ ಸಮಯದಲ್ಲಿ ಹಾರುವಾಗ ಜೊತೆಗಿದ್ದ 11 ಯೋಧರು ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ, ಆದರೆ ಯೋಧ ಮಂಜುನಾಥ ಕಾಣದೇ ಇದ್ದಾಗ ಹುಡುಕಾಟ ಆರಂಭವಾಯಿತು, ಬಳಿಕ ಸುತೆಂಡಿ ಗ್ರಾಮದ ಬಳಿ ಇದ್ದ ಹೊಲದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾದರು. ತಕ್ಷಣ ಇತರ ಅಧಿಕಾರಿಗಳು ಮಂಜುನಾಥ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮಂಜುನಾಥ ಇವರ ಪಾರ್ಥಿವ ಶರೀರ ನಾಳೆ ಸ್ವಗ್ರಾಮ ಹೊಸನಗರ ತಾಲೂಕಿನ ಪಟಗುಪ್ಪ ಬಳಿಯ ಸಂಕೂರಿನಲ್ಲಿ ಬರಲಿದ್ದು ಸಕಲ ಸರಕಾರಿ ಗೌರವದಿಂದ ಅಂತ್ಯಕ್ರಿಯೆ ನೆರವೇರಲಿದೆ.