|
ನವ ದೆಹಲಿ – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ 2025-26ನೇ ಸಾಲಿನ ಮುಂಗಡಪತ್ರ ಮಂಡಿಸಿದರು. ಈ ಬಜೆಟ್ ಆದಾಯ ತೆರಿಗೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, 12 ಲಕ್ಷ ರೂಪಾಯಿ ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದೆ. ಈ ನಿರ್ಣಯದಿಂದ ನೇರ ತೆರಿಗೆಯಿಂದ ಬರುವ ಆದಾಯದಲ್ಲಿ 1 ಲಕ್ಷ ಕೋಟಿ ರೂಪಾಯಿ ಮತ್ತು ಪರೋಕ್ಷ ತೆರಿಗೆ ಆದಾಯದಲ್ಲಿ 2 ಸಾವಿರದ 600 ಕೋಟಿ ರೂಪಾಯಿ ಹೊರೆ ಬೀಳಲಿದೆ. ಬಜೆಟ್ ಅಧಿವೇಶನದಲ್ಲಿ ಮುಂದಿನ ವಾರ ಹೊಸ ತೆರಿಗೆ ರಚನೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಇದರಿಂದ ಔಷಧಿಗಳಿಂದ ಹಿಡಿದು ಕೈಗಾರಿಕಾ ಸರಕುಗಳವರೆಗೆ ಹಲವು ವಲಯಗಳಿಗೆ ಲಾಭ ಆಗಲಿದೆ. ಈ ಬಜೆಟ್ 10 ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿದೆ. ಇವುಗಳಲ್ಲಿ ಕೃಷಿ, ಉತ್ಪಾದನೆ, ಉದ್ಯೋಗ, ಸೂಕ್ಷ್ಮ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಸಂಶೋಧನೆ ವಲಯಗಳು ಸೇರಿವೆ.
2025-26ನೇ ಸಾಲಿನ ಪರಿಷ್ಕೃತ ಬಜೆಟ್ ಅಂದಾಜುಗಳು
|
ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆಗಳು ಹೇಗಿರುತ್ತವೆ ?ಇದರ ಪ್ರಕಾರ, 12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ವ್ಯಕ್ತಿ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಶೇಕಡಾ 15 ರಷ್ಟು ಇಲ್ಲಿ ತೋರಿಸಿರುವ ತೆರಿಗೆಯನ್ನು ವಾಸ್ತವವಾಗಿ ವಿಧಿಸಲಾಗುವುದಿಲ್ಲ; ಆದರೆ 12 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಎಲ್ಲಾ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ವೇತನವೆಂದು 12 ಲಕ್ಷ 75 ಸಾವಿರಗಳವರೆಗೆ ವೇತನ ಆದಾಯ ಹೊಂದಿರುವವರು ಸಹ ಈ ವಿನಾಯಿತಿಯನ್ನು ಪಡೆಯುತ್ತಾರೆ. |
ಬಜೆಟ್‌ನ ಮುಖ್ಯಾಂಶಗಳು
* ಹಿರಿಯ ನಾಗರಿಕರಿಗೆ ಟಿ.ಡಿ.ಎಸ್. ಮಿತಿ 50 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗೆ ಏರಿಕೆ
* ಎಲ್ಲಾ ಸರಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬ್ರಾಡ್ಬ್ಯಾಂಡ್ ಸೌಲಭ್ಯಗಳನ್ನು ಒದಗಿಸಲಾಗುವುದು.
* ಮುಂದಿನ ವರ್ಷದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 10 ಸಾವಿರ ಹೆಚ್ಚುವರಿ ಸ್ಥಾನಗಳು ಹೆಚ್ಚಿಸಿದರೇ ಮುಂದಿನ 5 ವರ್ಷಗಳಲ್ಲಿ 75 ಸಾವಿರ ಸ್ಥಾನಗಳನ್ನು ಹೆಚ್ಚಿಸಲಾಗುವುದು.
* ‘ಮೇಡ್ ಇನ್ ಇಂಡಿಯಾ’ ಹೆಸರಿನಲ್ಲಿ ವಿಶ್ವಾದ್ಯಂತ ಬಾಳಿಕೆ ಬರುವ ಆಟಿಕೆಗಳ ಉತ್ಪಾದನೆಯಲ್ಲಿ ಭಾರತಕ್ಕೆ ಹೆಸರು ತಂದು ಕೊಡಲು ಕ್ರಮ ಕೈಕೊಳ್ಳಲಾಗುವುದು.
* ದೇಶಾದ್ಯಂತ ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕೇಂದ್ರಗಳನ್ನು ಸ್ಥಾಪಿಸಲು 500 ಕೋಟಿ ರೂಪಾಯಿ ಅನುದಾನ
* ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ‘ಕ್ಯಾನ್ಸರ್ ಡೇ ಕೇರ್ ಸೆಂಟರ್’ಗಳನ್ನು ನಿರ್ಮಿಸಲಾಗುವುದು. ಮುಂದಿನ ಹಣಕಾಸು ವರ್ಷದಲ್ಲಿಯೇ 200 ಇಂತಹ ಕೇಂದ್ರಗಳನ್ನು ನಿರ್ಮಿಸಲಾಗುವುದು.
* ಬಿಹಾರಕ್ಕಾಗಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯ ಸ್ಥಾಪನೆಯನ್ನು ಘೋಷಿಸಲಾಯಿತು. ರಾಜ್ಯದಲ್ಲಿ ಐಐಟಿಗಳು ವಿಸ್ತಾರವಾಗಲಿದೆ. 3 ಹೊಸ ವಿಮಾನ ನಿಲ್ದಾಣಗಳನ್ನು ಸಹ ನಿರ್ಮಿಸಲಾಗುವುದು.
* ಮೊದಲ ಬಾರಿಗೆ ಉದ್ಯಮಿಗಳಾಗುತ್ತಿರುವ ಮಹಿಳೆಯರಿಗೆ 2 ಕೋಟಿ ರೂಪಾಯಿಗಳ ಅವಧಿ ಸಾಲ ಸಿಗಲಿದೆ.
* ರಾಜ್ಯಗಳ ಸಹಭಾಗಿತ್ವದಲ್ಲಿ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
ರೈತರಿಗೆ ಮಹತ್ವದ ಘೋಷಣೆಗಳು
* ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
* ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯಿಂದ ದೇಶದ 100 ಜಿಲ್ಲೆಗಳು ಪ್ರಯೋಜನ ಪಡೆಯಲಿವೆ.
* ಹೈನುಗಾರಿಕೆ ಮತ್ತು ಮೀನುಗಾರಿಕೆಗೆ 5 ಲಕ್ಷ ರೂಪಾಯಿಗಳವರೆಗೆ ಸಾಲ
ಯಾವುದು ಅಗ್ಗವಾಗಲಿದೆ?
* ವಿದ್ಯುತ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳಿಗೆ ಲಿಥಿಯಂ-ಅಯಾನ್ ಬ್ಯಾಟರಿಗಳು
* ಮೊಬೈಲ್ ಫೋನ್
* ಇ-ಕಾರ್
* ಎಲ್ಇಡಿ ಟಿವಿ
* ಬಟ್ಟೆ ವಸ್ತುಗಳು
* ದೇಶೀಯವಾಗಿ ತಯಾರಿಸಿದ ಟಿವಿಯ ಬಿಡಿಭಾಗಗಳು
* ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಒಟ್ಟು 36 ಅಗತ್ಯ ಔಷಧಿಗಳು
* 6 ಇತರ ಜೀವನಾವಶ್ಯಕ ಔಷಧಗಳು
* ಚರ್ಮದ ವಸ್ತುಗಳು
ಮಹಾಕುಂಭದಲ್ಲಿ ಕಾಲ್ತುಳಿತ; ವಿರೋಧಿ ಪಕ್ಷಗಳಿಂದ ಘೋಷಣೆ
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾಗ, ವಿರೋಧ ಪಕ್ಷಗಳ ಸದಸ್ಯರು ಪ್ರಯಾಗರಾಜನಲ್ಲಿ ನಡೆದ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಈ ಬೇಡಿಕೆಯನ್ನು ಸ್ವೀಕರಿಸದ ಕಾರಣ ಪ್ರತಿಪಕ್ಷಗಳು ಸಭೆಯಿಂದ ಹೊರನಡೆದವು. ಈ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದರು ಮತ್ತು 60 ಜನರು ಗಾಯಗೊಂಡಿದ್ದಾರೆ.
140 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸುವ ಬಜೆಟ್ ! – ಪ್ರಧಾನಿ ಮೋದಿ
ಇಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ 140 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸುವ ಬಜೆಟ್ ಆಗಿದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಮಾನ್ಯ ನಾಗರಿಕರು ಮುಂದಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಾರೆ. ಈ ಬಜೆಟ್ ಖಂಡಿತವಾಗಿಯೂ ಸಾಮಾನ್ಯ ಜನರ ಉಳಿತಾಯವನ್ನು ಹೆಚ್ಚಿಸುತ್ತದೆ. ಈ ಬಜೆಟ್ ದೇಶದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಗುರಿಗೆ ಅಧಿಕ ಚಾಲನೆ ಸಿಗಲಿದೆ. ಇದು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಖಂಡಿತವಾಗಿಯೂ ಲಾಭವಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.